ಕೋವಿಡ್ ಲಸಿಕೆಗಾಗಿ 6 ಗಂಟೆಗಳ ಕಾಲ ತಂದೆಯನ್ನು ಹೆಗಲ ಮೇಲೆ ಹೊತ್ತೊಯ್ದ ಪುತ್ರ !

Prasthutha|

ಬ್ರೆಝಿಲ್: ನಮ್ಮ ದೇಶದಲ್ಲಿ ಮನೆ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸಿಬ್ಬಂದಿಯು ಕೋವಿಡ್ ಲಸಿಕೆ ಪಡೆಯಲು ಪರಿಪರಿಯಾಗಿ ವಿನಂತಿಸಿದರೂ ಬಹಳಷ್ಟು ಮಂದಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಾರೆ. ಆದರೆ ಲಸಿಕೆ ಪಡೆಯಬೇಕೆಂದು ದೃಢನಿಶ್ಚಯ ಮಾಡಿದ ಯುವಕನೊಬ್ಬ ಕಾಡಿನ ನಡುವೆ ಬರೋಬ್ಬರಿ 6 ಗಂಟೆಗಳ ಕಾಲ ತನ್ನ ತಂದೆಯನ್ನು ಹೆಗಲ ಮೇಲೆ ಹೊತ್ತು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆದ ಘಟನೆ ಬ್ರೆಝಿಲ್’ನಿಂದ ವರದಿಯಾಗಿದೆ.

- Advertisement -

ಬ್ರೆಝಿಲ್’ನ ಅಮೆಜಾನ್ ಕಾಡಿನಲ್ಲಿ ವಾಸಿಸುವ ಬುಡಕಟ್ಟು ಜನಾಂಗದ ತಾವಿ (24) ತನ್ನ ತಂದೆ ವಾಹು (67) ಅವರನ್ನು ಹೆಗಲ ಮೇಲೆ ಹೊತ್ತು ತರುತ್ತಿರುವ ಫೋಟೋವನ್ನು ವೈದ್ಯರಾದ ಎರಿಕ್ಸ್ ಜೆನ್ನಿಂಗ್ಸ್ ತಮ್ಮ ಇನ್ಸ್ ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ಪೋಟೊ ಇದೀಗ ಸಾಕಷ್ಟು ವೈರಲ್ ಆಗಿದೆ. ಕುಗ್ರಾಮಗಳ ನಿವಾಸಿಗಳು ಲಸಿಕೆ ಪಡೆಯಲು ಎಷ್ಟು ಹರಸಾಸಹ ಪಡಬೇಕಿದೆ ಎಂಬುದನ್ನು ಈ ಫೋಟೋ ಜಗತ್ತಿಗೆ ಸಾರುವಂತಿದೆ. ದೀರ್ಘಕಾಲದ ಮೂತ್ರಸಂಬಂಧ ಕಾಯಿಲೆಯಿಂದ ಬಳಲುತ್ತಿರುವ ವಾಹುಗೆ ನಡೆಯಲು ಸಾಧ್ಯವಾಗದ ಕಾರಣ ಪುತ್ರ ತಾವಿಯ ಸಹಾಯದಿಂದ ಲಸಿಕಾ ಕೇಂದ್ರಕ್ಕೆ ಬರುವಂತಾಗಿತ್ತು.

ತಾವಿ ಹಾಗೂ ವಾಹು ಝೋಯಿ ಸಮುದಾಯಕ್ಕೆ ಸೇರಿದವರಾಗಿದ್ದು, ಬ್ರೆಝಿಲ್’ನ ಅಮೆಜಾನ್ ಕಾಡಿನಲ್ಲಿ ಈ ಸಮುದಾಯಕ್ಕೆ ಸೇರಿದ 325 ಮಂದಿ ವಾಸಿಸುತ್ತಿದ್ದಾರೆ. 1.2 ಮಿಲಿಯನ್ ಪುಟ್ಬಾಲ್ ಮೈದಾನಗಳಿಗೆ ಸಮಾನವಾದ ವಿಸ್ತೀರ್ಣದ ಹತ್ತಾರು ಹಳ್ಳಿಗಳಲ್ಲಿ ಇವರು ಪ್ರತ್ಯೇಕ ಗುಡಿಸಲುಗಳಲ್ಲಿ ವಾಸವಾಗಿದ್ದಾರೆ. ಕಾಡಿನ ನಡುವೆ ಸರ್ಕಾರ ಸ್ಥಾಪಿಸಿರುವ ತಾತ್ಕಾಲಿಕ ಲಸಿಕಾ ಕೇಂದ್ರಕ್ಕೆ ಬಂದು ಇವರು ಲಸಿಕೆ ಪಡೆಯಬೇಕಾಗಿದೆ.

- Advertisement -

ಸರ್ಕಾರಿ ದಾಖಲೆಗಳ ಪ್ರಕಾರ ಇದುವರೆಗೂ 853 ಸ್ಥಳೀಯ ನಿವಾಸಿಗಳು ಕೋವಿಡ್-19ಕ್ಕೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಆದರೆ ಬ್ರೆಝಿಲ್’ನ ಪ್ರಮುಖ NGOಗಳಲ್ಲಿ ಒಂದಾಗ ಆಕಿಬ್ ನಡೆಸಿದ ಸಮೀಕ್ಷೆಯ ಪ್ರಕಾರ 2020 ಮಾರ್ಚ್’ನಿಂದ 2021 ಮಾರ್ಚ್’ವರೆಗೆ, ವರ್ಷವೊಂದರಲ್ಲೇ ಕನಿಷ್ಠ ಸಾವಿರಕ್ಕೂ ಅಧಿಕ ಮಂದಿ ಕೋವಿಡ್’ಗೆ ಬಲಿಯಾಗಿದ್ದಾರೆ.

Join Whatsapp