ಸಾಲಿಡಾರಿಟಿ ವತಿಯಿಂದ ಏಕ ದಿನ ಯುವ ಸಮಾವೇಶ, ಸಾಧಕರಿಗೆ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್’

Prasthutha|

ಬೆಂಗಳೂರು: ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಏಕ ದಿನ ಯುವ ಸಮಾವೇಶವು ಡಿಸೆಂಬರ್ 18, ಭಾನುವಾರದಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾದಲ್ಲಿ ನಡೆಯಲಿದೆ. ‘ಭರವಸೆ – ಮರುನಿರ್ಮಾಣ – ಘನತೆ’ ಎಂಬ ಧ್ಯೇಯವಾಕ್ಯದಡಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಯುವಕ – ಯುವತಿಯರು ಭಾಗವಹಿಸಲಿದ್ದಾರೆ ಎಂದು ಸಾಲಿಡಾರಿಟಿ ಯೂತ್ ಮೂವ್’ಮೆಂಟ್, ಕರ್ನಾಟಕ ಅಧ್ಯಕ್ಷ ಲಬೀದ್ ಶಾಫಿ ತಿಳಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ನಿರ್ಮಾಣಾತ್ಮಕ ಕೆಲಸಗಳಲ್ಲಿ ಯುವ ಸಮೂಹವನ್ನು ಸಜ್ಜುಗೊಳಿಸುವುದು ಈ ಸಮ್ಮೇಳನದ ಬಹು ಮುಖ್ಯ ಗುರಿಯಾಗಿದೆ. ಸಮಾಜದಲ್ಲಿ ಶಾಂತಿ, ಪ್ರಗತಿ ಹಾಗೂ ಅಭ್ಯುದಯವನ್ನು ಸಾಧಿಸಲು ಯುವಕರನ್ನು ರಚನಾತ್ಮಕವಾಗಿ ಸಿದ್ಧಗೊಳಿಸುವುದು ಕಾಲದ ಬೇಡಿಕೆಯಾಗಿದೆ. ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಈ ನಿಟ್ಟಿನಲ್ಲಿ ತನ್ನ ಕೆಲಸವನ್ನು ನಿರ್ವಹಿಸುತ್ತಿದೆ. ಯುವಕರ ನೈತಿಕ, ಸಾಮಾಜಿಕ, ಆರ್ಥಿಕ, ಆರೋಗ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಯುವಕರನ್ನು ಸಬಲೀಕರಿಸುವುದು ಸಾಲಿಡಾರಿಟಿಯ ಪ್ರಥಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಡೆಯಲಿರುವ ಸಮಾವೇಶವು ಹೊಸ ದಿಶೆಯನ್ನು ನೀಡಲಿದೆ ಎಂದರು.


ಈ ಸಮಾವೇಶದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಪ್ರಮುಖ ಚಿಂತಕರು, ವಿದ್ವಾಂಸರು, ಲೇಖಕರು, ಪತ್ರಕರ್ತರು ಭಾಗವಹಿಸಲಿದ್ದಾರೆ. ಪ್ರಮುಖ ಭಾಷಣಕಾರರಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ನ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಾದತುಲ್ಲಾ ಹುಸೈನಿ, ವಿದ್ವಾಂಸರಾದ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ, ಯುವ ನಾಯಕರಾದ ನಹಾಸ್ ಮಾಲ, ಪ್ರಖ್ಯಾತ ವಾಗ್ಮಿಗಳಾದ ಡಾ. ತಾಹಾ ಮತೀನ್, ಮುಹಮ್ಮದ್ ಕುಂಞಿ, ಮಾನವ ಹಕ್ಕು ಹೋರಾಟಗಾರರಾದ ಕೆ.ಕೆ.ಸುಹೈಲ್, ಲದೀದಾ ಪರ್ಝಾನಾ, ಶಬರಿಮಾಲ, ಪತ್ರಕರ್ತರಾದ ಆದಿತ್ಯ ಮೆನನ್, ಬಿ.ಎಂ. ಹನೀಫ್, ಪ್ರಶಾಂತ್ ಟಂಡನ್ ಮುಂತಾದ ಪ್ರಮುಖ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾವೇಶದ ಪ್ರಮುಖ ಆಕರ್ಷಣೆಯಾಗಿ ‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್’ ನ್ನು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಯುವ ಸಾಧಕರಿಗೆ ನೀಡಲಾಗುವುದು.
‘ಸಾಲಿಡಾರಿಟಿ ಎಕ್ಸಲೆನ್ಸ್ ಅವಾರ್ಡ್ – 2022’ ಆಯ್ಕೆಯಾದವರ ವಿವರ ಈ ಕೆಳಗಿನಂತಿದೆ –

- Advertisement -


1) ಮಾಧ್ಯಮ – ಜಿ.ಮಹಾಂತೇಶ್ ಭದ್ರಾವತಿ, ಸಂಪಾದಕರು, ದಿ ಫೈಲ್
2) ಮಾನವ ಹಕ್ಕು ಕಾರ್ಯಕರ್ತೆ – ಡಾ. ಅಶ್ವಿನಿ ಕೆ.ಪಿ. ಕೋಲಾರ – ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ವರ್ಣಭೇದ ನೀತಿ ಮತ್ತು ಅಸಹಿಷ್ಣುತೆಗೆ ಸಂಬಂಧಿಸಿದ ಸ್ವತಂತ್ರ ತಜ್ಞರಾಗಿ ಆಯ್ಕೆಯಾದ ಪ್ರಥಮ ಭಾರತೀಯೆ ಮತ್ತು ಪ್ರಥಮ ಏಷ್ಯನ್

3) ಮಾನವೀಯ ಸೇವೆ – ತಬಸ್ಸುಮ್ ಮಂಗಳೂರು, ಸ್ನೇಹದೀಪ ಅನಾಥಾಲಯದ ಮೂಲಕ ಹೆಚ್.ಐ.ವಿ. ಸೋಂಕಿತ ಮಕ್ಕಳ ಸೇವೆ
4) ಸಮಾಜ ಸೇವೆ – ತನ್ವೀರ್ ಅಹ್ಮದ್.
ಮರ್ಸಿ ಏಂಜಲ್ಸ್ ಸಂಸ್ಥೆಯ ಮೂಲಕ ಕೋವಿಡ್ ಪೀಡಿತರ ಸೇವೆ
5) ಪರಿಸರ – ಮನ್ಸೂರ್ ಗೌಸ್ ಬೆಂಗಳೂರು – ತ್ಯಾಜ್ಯವನ್ನು ಪುನರ್ಬಳಕೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಸರ ಸಂರಕ್ಷಣೆ
6) ಕ್ರೀಡೆ: ಮುಹಮ್ಮದ್ ಅಝ್ಮತ್ ಬೆಂಗಳೂರು
7) ಶಿಕ್ಷಣ: ಸುಹೇಬ್ ಬೇಗ್ ಕೆರೆಬಿಳಿಚಿ (ದಾವಣಗೆರೆ ಜಿಲ್ಲೆ)
ಗಣಿತ ಶಿಕ್ಷಣದ ಪ್ರಯೋಗಾಲಯದಲ್ಲಿ ನವೀನ ಕಲ್ಪನೆ
8) ಆರ್ಥಿಕ ಸಬಲೀಕರಣ: ಅಸೋಷಿಯೇಷನ್ ಫಾರ್ ಮುಸ್ಲಿಂ ಪ್ರೊಫೆಷನಲ್ಸ್ (ಎಎಂಪಿ)
ಉದ್ಯೋಗ ಮೇಳವನ್ನು ವ್ಯಾಪಕವಾಗಿ ಹಮ್ಮಿಕೊಳ್ಳುವ ಮೂಲಕ ಯುವಜನರಲ್ಲಿ ಆರ್ಥಿಕ ಸಬಲೀಕರಣ
9) ಕಲೆ ಮತ್ತು ಸಂಸ್ಕೃತಿ : ಶೇಖ್ ಮುಹಮ್ಮದ್ ಇದ್ರೀಸ್ ಶಿವಮೊಗ್ಗ
ಕಲೆಯಲ್ಲಿ ಹೊಸ ಆವಿಷ್ಕಾರ ಮತ್ತು ಕ್ಯಾಲಿಗ್ರಫಿ
10) ವಿಶೇಷ ಚೇತನ ಸ್ಫೂರ್ತಿ: ಅಬ್ದುಲ್ ರೆಹಮಾನ್, ಕಲಬುರ್ಗಿ
ವಿಕಲ ಚೇತನರಾದರೂ ತನ್ನ ಪರಿಶ್ರಮದ ಮೂಲಕ ಯುವಜನತೆಗೆ ಸ್ಫೂರ್ತಿ
ಅದೇ ರೀತಿ ‘ಮಾಧ್ಯಮ ವಿಶ್ಲೇಷಣೆ ಮತ್ತು ದ್ವೇಷ ಭಾಷಣ: ಒಂದು ಅವಲೋಕನ’ ಎಂಬ ವಿಷಯದಲ್ಲಿ ಚಾವಡಿ ಚರ್ಚೆ ನಡೆಯಲಿರುವುದು. ಈ ಚರ್ಚೆಯಲ್ಲಿ ಆದಿತ್ಯ ಮೆನನ್ (ಹಿರಿಯ ಪತ್ರಕರ್ತರು, ದಿ ಕ್ವಿಂಟ್, ನವ ದೆಹಲಿ), ಪ್ರಶಾಂತ್ ಟಂಡನ್ (ಹಿರಿಯ ಪತ್ರಕರ್ತರು, ನವ ದೆಹಲಿ), ಬಿ.ಎಂ. ಹನೀಫ್ (ಹಿರಿಯ ಪತ್ರಕರ್ತರು, ಬೆಂಗಳೂರು) ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯನ್ನು ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಕಾರ್ಯದರ್ಶಿ ಮುಹಮ್ಮದ್ ರಿಹಾನ್, ಸಮ್ಮೇಳನ ಸಂಚಾಲಕ ಮುಹಮ್ಮದ್ ಅಖೀಲ್, ಸಾಲಿಡಾರಿಟಿ ಯೂತ್ ಮೂವ್’ಮೆಂಟ್ ಬೆಂಗಳೂರು ನಗರ ಅಧ್ಯಕ್ಷ ಮಾಝ್ ಸಲ್ಮಾನ್ ಮನಿಯಾರ್, ಮಾಧ್ಯಮ ಸಂಯೋಜಕರು ಮುಹಮ್ಮದ್ ನವಾಝ್ ಉಪಸ್ಥಿತರಿದ್ದರು.

Join Whatsapp