ಸೋಶಿಯಲಿಸಂ Weds ಮಮತಾ ಬ್ಯಾನರ್ಜಿ! : ಸಿದ್ಧಾಂತ ಪ್ರೇಮಿಗಳ ಮದುವೆ ಆಮಂತ್ರಣ ಪತ್ರ ವ್ಯಾಪಕ ವೈರಲ್!

Prasthutha|

ಸೇಲಂ : ಸಾಮಾನ್ಯವಾಗಿ ಸಿನೆಮಾ ನಟರು, ಕ್ರಿಕೆಟಿಗರು, ಸೆಲೆಬ್ರಿಟಿಗಳು ಮದುವೆಯಾದರೆ, ಇಡೀ ದೇಶಕ್ಕೆ ಸುದ್ದಿಯಾಗುತ್ತದೆ. ಆದರೆ, ಇಲ್ಲೊಂದು ಜೋಡಿ ತಮ್ಮ ಹೆಸರಿನ ಕಾರಣಕ್ಕಾಗಿ ಇಡೀ ದೇಶಾದ್ಯಂತ ಸುದ್ದಿಯಾಗಿದ್ದಾರೆ. ಇವರ ಮದುವೆ ಆಮಂತ್ರಣ ಪತ್ರವೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಯಾಕೆಂದರೆ, ಇದೇ ಭಾನುವಾರ ಸರಳ ಮದುವೆಯಾಗಲಿರುವ ಈ ಜೋಡಿಯ ಹೆಸರೇ ಹಾಗಿದೆ. ಹೌದು, ವರನ ಹೆಸರು ಸೋಶಿಯಲಿಸಂ, ವಧುವಿನ ಹೆಸರು ಮಮತಾ ಬ್ಯಾನರ್ಜಿ!

- Advertisement -

ಸೇಲಂನ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಎ. ಮೋಹನ್‌ ಎಂಬವರು ವರನ ತಂದೆ. ವೀರಪಾಂಡಿ ವಿಧಾನಸಭಾ ಕ್ಷೇತ್ರದಿಂದ ಒಂದು ಬಾರಿ ಚುನಾವಣೆಗೂ ಸ್ಪರ್ಧಿಸಿದ್ದವರು. ಹೀಗಾಗಿ ಸಹಜವಾಗಿಯೇ ತಮ್ಮ ಸಿದ್ಧಾಂತಕ್ಕನುಗುಣವಾಗಿಯೇ ಮಕ್ಕಳಿಗೆ ಹೆಸರಿಟ್ಟಿದ್ದರು. ಅವರಿಗೆ ಮೂರು ಗಂಡು ಮಕ್ಕಳಿದ್ದು, ಅವರ ಹೆಸರುಗಳನ್ನು ಕಮ್ಯುನಿಸಂ, ಲೆನಿನಿಸಂ ಮತ್ತು ಸೋಶಿಯಲಿಸಂ ಎಂದಿಟ್ಟಿದ್ದರು.

ನಮ್ಮ ಹಲವಾರು ಸಂಗಾತಿಗಳು ತಮ್ಮ ಮಕ್ಕಳಿಗೆ ಮಾರ್ಕ್ಸ್‌ ಮತ್ತು ಲೆನಿನ್‌ ಹೆಸರಿಟ್ಟಿದ್ದಾರೆ. ಆದರೆ ಸೋಶಿಯಲಿಸಂ ಎಂದು ಯಾರಾದರೂ ಇಟ್ಟಿದ್ದಾರೋ ಗೊತ್ತಿಲ್ಲ ಎಂದು ಮೋಹನ್‌ ಹೇಳುತ್ತಾರೆ. ಮೋಹನ್‌ ಅವರ ಮಕ್ಕಳೂ ಕಮ್ಯೂನಿಸ್ಟ್‌ ಸಿದ್ಧಾಂತಕ್ಕೆ ಬದ್ಧರಾಗಿ ಕೆಲಸ ಮಾಡಿದ್ದಾರೆ. ಅದರಲ್ಲಿ ಮಗ ಲೆನಿನಿಸಂ ತನ್ನ ಮಗನಿಗೆ, ಮಾರ್ಕ್ಸಿಸಂ ಎಂದು ಹೆಸರಿಟ್ಟಿದ್ದಾನೆ. ಇದು ಇದೀಗ ಮದುವೆಯಾಗುತ್ತಿರುವ ವರನ ಹೆಸರಿನ ಹಿನ್ನೆಲೆ.

- Advertisement -

ಇನ್ನೊಂದೆಡೆ, ವಧುವಿನ ಕುಟುಂಬ ಸಂಬಂಧಿಯಾಗಿದ್ದರೂ, ಅವರು ಕಾಂಗ್ರೆಸ್‌ ಬೆಂಬಲಿಗರು. ೨೨ ವರ್ಷಗಳ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್‌ ನಲ್ಲಿ ಮಮತಾ ಬ್ಯಾನರ್ಜಿ ತುಂಬಾ ಕಠಿಣ ಕೆಲಸಗಳನ್ನು ಮಾಡಿ ಗುರುತಿಸಿಕೊಂಡಿದ್ದುದರಿಂದ, ಅವರ ಹೆಸರನ್ನು ಈಗಿನ ವಧುವಿಗೆ ಇಡಲಾಗಿತ್ತು.

ಈಗ ಪಶ್ಚಿಮ ಬಂಗಾಳದದಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ದಾರೆ. ಮಾರ್ಕ್ಸ್‌ ವಾದದ ಎಡಪಂಥೀಯ ಪಕ್ಷಗಳು ಅಧಿಕಾರ ಕಳೆದುಕೊಂಡಿವೆ. ಅಲ್ಲಿ ಅವುಗಳು ಪರಸ್ಪರ ವಿರೋಧಿಗಳಾದರೂ, ಇಲ್ಲಿ ಅವರ ಸಿದ್ಧಾಂತಗಳನ್ನು ಪ್ರತಿನಿಧಿಸುವ ಹೆಸರಿನ ಯುವ ಜೋಡಿಯೊಂದು ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ.

ಮದುವೆ ಆಮಂತ್ರಣ ಪತ್ರವನ್ನು ಯಾರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ, ಮೋಹನ್‌ ಮತ್ತು ಕುಟುಂಬಕ್ಕೆ ಈಗ ಕರೆಗಳ ಮೇಲೆ ಕರೆಗಳು ಬರುತ್ತಿವೆಯಂತೆ. ಕರೆ ಮಾಡಿ ಶುಭಾಶಯಗಳನ್ನೂ ಕೋರುತ್ತಿದ್ದಾರಂತೆ. ನಾವು ಒಂದು ದಿನ ಸಾಯುತ್ತೇವೆ. ಆದರೆ, ನಾವು ಪ್ರತಿನಿಧಿಸುವ ಸಿದ್ಧಾಂತದ ಪ್ರತೀಕವಾದ ಈ ಹೆಸರುಗಳು ಯಾವಾಗಲೂ ಶಾಶ್ವತವಾಗಿರುತ್ತವೆ ಎಂದು ಮೋಹನ್‌ ಹೇಳುತ್ತಾರೆ.



Join Whatsapp