ಸೋಶಿಯಲ್ ಫೋರಂ ಮುಂಚೂಣಿ ನಾಯಕ ಅಬ್ದುಲ್ ಹಮೀದ್ ಪಾಣೆಮಂಗಳೂರು ನಿಧನ

Prasthutha|

ಒಮನ್, ಜು.22: ಸೋಶಿಯಲ್ ಫೋರಂ ಒಮಾನ್ ನ ಮುಂಚೂಣಿ ನಾಯಕ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಣೆಮಂಗಳೂರು ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಅವರಿಗೆ 54 ವರ್ಷ ವಯಸ್ಸಾಗಿತ್ತು.

- Advertisement -


ಸುಮಾರು 1991ರಿಂದ (30 ವರ್ಷ) ಒಮಾನ್‌‌ ನಲ್ಲಿ ದುಡಿಯುತ್ತಿರುವ ಅಬ್ದುಲ್ ಹಮೀದ್ ಸಾಮಾಜಿಕ ಸೇವೆಯಲ್ಲಿ ಮುಂಚೂಣಿ ನಾಯಕರಾಗಿದ್ದರು. ಸೋಶಿಯಲ್ ಫೋರಂ ಒಮಾನ್ ತಂಡದಲ್ಲಿ ತನ್ನನ್ನು ‌ಸಂಪೂರ್ಣ ತೊಡಗಿಸಿಕೊಂಡಿದ್ದರು. ಕೋವಿಡ್ ನಿಂದ ಮೃತಪಟ್ಟ ಒಮಾನಿನ ಅನಿವಾಸಿ ಪ್ರಜೆಗಳ ದಫನ ಕಾರ್ಯದಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದ ಅಬ್ದುಲ್ ‌ಹಮೀದ್ ಒಮಾನಿನ ಹಲವು ಸಂಘ ಸಂಘಸಂಸ್ಥೆಗಳ ಜೊತೆ ನಿರಂತರ ಒಡನಾಟವನ್ನಿಟ್ಟುಕೊಂಡಿದ್ದರು.

ಅಬ್ದುಲ್ ಹಮೀದ್ ಅವರ ನಿಧನಕ್ಕೆ ಒಮಾನಿನ ಹಲವು ಅನಿವಾಸಿ ಸಂಘಸಂಸ್ಥೆಗಳು ತೀವ್ರ ಕಂಬನಿ ಮಿಡಿದಿದ್ದು, ಅವರ ನಿಧನ ಅನಿವಾಸಿಗಳ ಸಾಮಾಜಿಕ ಸೇವೆಗೆ ಉಂಟಾದ ಬಲುದೊಡ್ಡ ನಷ್ಟವೆಂದು ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.

- Advertisement -

ಸ್ನೇಹಿತರಲ್ಲೂ, ಹಿತೈಷಿಗಳಲ್ಲೂ ಸಾಮಾಜಿಕ ಸೇವೆಯ ಬಗ್ಗೆ ಅರಿವು, ಜಾಗೃತಿ ಮೂಡಿಸುತ್ತಿದ್ದ ಅಬ್ದುಲ್ ಹಮೀದ್ ಅವರು, ತಾವು ಮೇಲುಸ್ತುವಾರಿಯಲ್ಲಿದ್ದ ಸೋಶಿಯಲ್ ಫೋರಂ ಒಮಾನ್‌‌ ಮೂಲಕ ಅದನ್ನು ಮಾಡಿ ತೋರಿಸಿದ್ದರು.
ಫೋರಂನ ಸದಸ್ಯರಲ್ಲೂ ಕುಟುಂಬ ಸಂಬಂಧಗಳ ನಿರ್ವಹಣೆಯ‌ ಬಗ್ಗೆ, ದೇಶದ ಉನ್ನತಿಗೆ ಪ್ರಜೆಯಾಗಿ ತನ್ನ ಕರ್ತವ್ಯಗಳ‌ ಬಗ್ಗೆ ಜಾಗೃತಿ‌ ಮೂಡಿಸುತ್ತಾ ಮಾನವೀಯ ಸಂಬಂಧ ಮತ್ತು ಸಂದೇಶಗಳನ್ನು ನಿರಂತರವಾಗಿ ನೀಡುತ್ತಾ ಬಂದಿದ್ದರು. ಅಲ್ಲದೆ ಒಮಾನಿನ ಕಾನೂನು ನಿಯಮ ನಿಯಮಾವಳಿಗಳನ್ನು ಸಂಪೂರ್ಣವಾಗಿ ತಿಳಿದಿದ್ದ ಅವರು, ಇಲ್ಲಿನ ಅನಿವಾಸಿಗಳಿಗೆ ಪ್ರೀತಿಯ ಹಮೀದಾಕರಾಗಿಯೇ ಗುರುತಿಸಿಕೊಂಡಿದ್ದರು, ಕುಟುಂಬ ಸಂಬಂಧದ ವಿಷಯದಲ್ಲಿ ಸಲಹೆಗಾರನಂತೆ, ಮಕ್ಕಳಿಗೆ ಗೆಳೆಯನಂತೆ, ಕಿರಿಯ ಅನಿವಾಸಿಗಳಿಗೆ ಅಣ್ಣನಂತೆ, ತಾನು ಪ್ರತಿನಿಧಿಸುವ ತಂಡದ ಸದಸ್ಯರಿಗೆ ಕಪ್ತಾನನಂತೆ ಕೆಲಸ ಮಾಡಿದ್ದ ಅಬ್ದುಲ್ ಹಮೀದ್ ಅವರ ನಿಧನ ಅನಿವಾಸಿ ಭಾರತೀಯರಲ್ಲಿ ಅನಾಥ ಪ್ರಜ್ಞೆ ಮೂಡಿಸಿದೆ.

ಕೋಡಿಸಭೆ ಮುಹಮ್ಮದ್ ಅವರ ಮಗಳು ಸಫಿಯಾರನ್ನು ಸುಮಾರು 25 ವರ್ಷಗಳ ಹಿಂದೆ ಮದುವೆಯಾಗಿದ್ದ ಅಬ್ದುಲ್ ಹಮೀದ್ ಅವರು, ನಾಲ್ಕು ಗಂಡು, ಒಂದು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಬಳಗವನ್ನೂ, ಸ್ನೇಹಿತರನ್ನೂ ಮತ್ತು ಹಿತೈಷಿಗಳನ್ನೂ ಅಗಲಿದ್ದಾರೆ.

Join Whatsapp