ಬೆಳಗಾವಿ: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲೆಡೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುತ್ತಿರುವ ಅಧಿಕಾರಿಗಳು ಹಿರೇಬಾಗೇವಾಡಿ ಟೋಲ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ.
ಮುಂಬೈನಿಂದ ಬೆಂಗಳೂರಿಗೆ ಹೊರಟಿದ್ದ ಕೆಎ 70 1459 ಸಂಖ್ಯೆಯ ಖಾಸಗಿ ಬಸ್ ಅನ್ನು ಇಂದು ಬೆಳಗಿನ ಜಾವ 3.30ರ ಸುಮಾರಿಗೆ ತಪಾಸಣೆ ನಡೆಸಿದ ವೇಳೆ ಅಕ್ರಮ ಹಣ ಪತ್ತೆಯಾಗಿದ್ದು ಅದನ್ನು ಜಪ್ತಿ ಮಾಡಿದ ಪೊಲೀಸರು ಅನಧಿಕೃತ ಹಣದ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖುದ್ದು ಸ್ಥಳಕ್ಕೆ ಬೇಟಿ ನೀಡಿ ಪೊಲೀಸರ ಕಾರ್ಯಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
47.44 ಕೋಟಿ ವಸ್ತು ಜಪ್ತಿ
ರಾಜ್ಯದಲ್ಲಿ ಕಳೆದ ಆರು ದಿನಗಳ ಕಾರ್ಯಚರಣೆಯಲ್ಲಿ ಒಟ್ಟಾರೆ 47 ಕೋಟಿ 43 ಲಕ್ಷದ 85 ಸಾವಿರ ರೂ. ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳಿಂದ ಅಧಿಕೃತ ಮಾಹಿತಿ ಹೊರಬಿದ್ದಿತ್ತು. ನೀತಿ ಸಂಹಿತೆ ಜಾರಿ ಬಳಿಕ 6 ದಿನಗಳ ಕಾರ್ಯಾಚರಣೆಯಲ್ಲಿ 12 ಕೋಟಿ 82 ಲಕ್ಷ 94 ಸಾವರ ರೂ. ನಗದು, ರಾಜ್ಯದಲ್ಲಿ 16 ಕೋಟಿ ಮೌಲ್ಯದ 2,78,798 ಲೀಟರ್ ಮದ್ಯ, 41 ಲಕ್ಷ ರೂಪಾಯಿ ಮೌಲ್ಯದ 79.44 ಕೆ.ಜಿ ಮಾದಕವಸ್ತು, 6 ಕೋಟಿ 72 ಲಕ್ಷ ರೂಪಾಯಿ ಮೌಲ್ಯದ 13.575 ಕೆ.ಜಿ ಚಿನ್ನ, 63 ಲಕ್ಷ 98 ಸಾವಿರ ಮೌಲ್ಯದ 88.763 ಕೆಜಿ ಬೆಳ್ಳಿ ಆಭರಣ ಸೀಜ್ ಮಾಡಲಾಗಿತ್ತು.
ಈವರೆಗೆ 10 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಗಿಫ್ಟ್’ಗಳು ವಶ ಪಡೆಸಿಕೊಂಡಿದ್ದು, ನಗದು, ಮದ್ಯ, ಡ್ರಗ್ಸ್ ಜಪ್ತಿ ಸಂಬಂಧ ಒಟ್ಟು 316 ಪ್ರಕರಣ ದಾಖಲು ಮಾಡಲಾಗಿದೆ. 31,486 ಶಸ್ತ್ರಾಸ್ತ್ರ ಠೇವಣಿ, 10 ಶಸ್ತ್ರಾಸ್ತ್ರಗಳನ್ನ ಠೇವಣಿ ಮಾಡಿಲ್ಲ. ರಾಜ್ಯದಲ್ಲಿ ಈವರೆಗೆ 7 ಗನ್ ಲೈಸೆನ್ಸ್’ಗಳನ್ನು ರದ್ದುಗೊಳಿಸಲಾಗಿದೆ. ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ 1,416 ಜನರ ವಿರುದ್ಧ ಮೊಕದ್ದಮೆ ಹೂಡಲಾಗಿದೆ.