ಸಹೋದರನನ್ನು ಕೊಲೆಗೈದು ಶವವನ್ನುಎಸೆದಿದ್ದ ಅಕ್ಕ, ಮತ್ತಾಕೆಯ ಪ್ರಿಯಕರ 8 ವರ್ಷಗಳ ಬಳಿಕ ಪೊಲೀಸ್ ಬಲೆಗೆ

Prasthutha|

ಬೆಂಗಳೂರು: ಎಂಟು ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ರಹಸ್ಯವನ್ನು ಭೇದಿಸಿರುವ ಜಿಗಣಿ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಗಳಿಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಕೊಲೆ ನಡೆಸಿ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಿಜಯಪುರ ಮೂಲದ ಭಾಗ್ಯಶ್ರೀ ಹಾಗೂ ಸುಪುತ್ರ ಶಂಕರಪ್ಪ ತಳವಾರ ಬಂಧಿತ ಆರೋಪಿಗಳಾಗಿದ್ದಾರೆ.
ಭಾಗ್ಯಶ್ರೀ ಮತ್ತು ಸುಪುತ್ರ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ವಡೇರಮಂಚನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಜೊತೆಯಲ್ಲಿ ವಾಸವಾಗಿದ್ದರು.
ಮೊದಲ ಪತಿಯಿಂದ ದೂರವಾಗಿದ್ದ ಭಾಗ್ಯಶ್ರೀ ನಗರಕ್ಕೆ ಬಂದು ಮಾಜಿ ಪ್ರಿಯಕರನಾಗಿದ್ದ ಸುಪುತ್ರನ ಜೊತೆ ವಾಸವಾಗಿದ್ದಳು. ಈ ವಿಷಯ ಭಾಗ್ಯಶ್ರೀ ಕಿರಿಯ ಸೋದರ ಲಿಂಗರಾಜ್ ಪೂಜಾರಿಗೆ ಗೊತ್ತಾಗಿತ್ತು. ಅಕ್ಕನ ಅನೈತಿಕ ಸಂಬಂಧವನ್ನು ಲಿಂಗರಾಜ್ ವಿರೋಧಿಸಿ, ಜಗಳ ಮಾಡಿದ್ದನು.
ತನ್ನ ಸಂಬಂಧಕ್ಕೆ ಅಡ್ಡಿಯಾದ ತಮ್ಮನನ್ನು ಕೊಲೆ ಮಾಡಲು ಭಾಗ್ಯಶ್ರೀ ಗೆಳೆಯನ ಜೊತೆ ಸೇರಿ ಸಂಚು ಮಾಡಿದ್ದಳು.ಅದರಂತೆ 2015 ಆಗಸ್ಟ್ 11ರಂದು ಇಬ್ಬರು ಸೇರಿ ಲಿಂಗರಾಜ್’ನನ್ನು ಕೊಲೆ ಮಾಡಿದ್ದರು. ಕೊಲೆಯ ನಂತರ ಶವವನ್ನು ತುಂಡು ತುಂಡು ಮಾಡಿದ್ದರು.
ತುಂಡು ತುಂಡಾಗಿದ್ದ ಅಂಗಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಕೊಂಡು ಬೇರೆ ಬೇರೆ ಸ್ಥಳದಲ್ಲಿ ಎಸೆದು ಭಾಗ್ಯಶ್ರೀ ಮತ್ತು ಸುಪುತ್ರ ಮಹಾರಾಷ್ಟ್ರದ ನಾಸಿಕ್ ಸೇರಿಕೊಂಡಿದ್ದರು. ನಾಸಿಕ್’ನಲ್ಲಿ ಇಬ್ಬರು ತಮ್ಮ ಹೆಸರು ಬದಲಿಸಿಕೊಂಡಿದ್ದರು.
ಜಿಗಣಿ ಸಮೀಪದ ವಿ ಇನ್ ಹೋಟೆಲ್ ಬಳಿ ಏರ್’ಬ್ಯಾಗ್’ನಲ್ಲಿ ಲಿಂಗರಾಜು ಕೈ ಕಾಲು ಪತ್ತೆಯಾಗಿತ್ತು. ಇದೀಗ ಎಂಟು ವರ್ಷಗಳ ಬಳಿಕ ಇಬ್ಬರು ಪೊಲೀಸರ ಬಲಗೆ ಬಿದ್ದಿದ್ದಾರೆ. ಜಿಗಣಿ ಠಾಣೆ ಇನ್’ಸ್ಪೆಕ್ಟರ್ ಸುದರ್ಶನ್ ಮತ್ತು ತಂಡ ಆರೋಪಿಗಳ ಹಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದೆ.



Join Whatsapp