ಪುತಿನ್ ವಿರುದ್ಧ ಹೊರಡಿಸಿರುವ ಬಂಧನ ವಾರಂಟನ್ನು ಟಾಯ್ಲೆಟ್ ಪೇಪರ್ ಎಂದ ರಷ್ಯಾ

Prasthutha|

ಮಾಸ್ಕೊ: ಅಧ್ಯಕ್ಷ ಪುತಿನ್ ಅವರನ್ನು ಬಂಧಿಸಲು ಐಸಿಸಿ ನೀಡಿರುವ ಆರೆಸ್ಟ್ ವಾರಂಟ್ ಟಾಯ್ಲೆಟ್ ಪೇಪರಿಗೆ ಸಮ ಎಂದು ರಷ್ಯಾದ ಭದ್ರತಾ ಕೌನ್ಸಿಲಿನ ಉಪಾಧ್ಯಕ್ಷರಾದ ದಿಮಿತ್ರಿ ಮೆದ್ವೆದೆವ್ ತಿರುಗೇಟು ನೀಡಿದ್ದಾರೆ.
ಐಸಿಸಿ- ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಬಂಧನಕ್ಕೆ ವಾರಂಟ್ ಹೊರಡಿಸಿದೆ. 2016ರಲ್ಲೇ ಐಸಿಸಿ ಒಪ್ಪಂದದಿಂದ ಹೊರ ಬಂದಿರುವ ದೇಶದವರಿಗೆ ವಾರಂಟ್ ಹೊರಡಿಸಿರುವುದು ಹೇಗೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯಾ ಜಕರೋವಾ ಹೇಳಿದ್ದಾರೆ. ಇದು ಕಾನೂನು ಬಾಹಿರ ಎಂದೂ ಅವರು ಹೇಳಿದ್ದಾರೆ.
ವ್ಲಾದಿಮಿರ್ ಪುತಿನ್ ವಿರುದ್ಧ ಇಂಟರ್ ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಆರೆಸ್ಟ್ ವಾರಂಟ್ ನೀಡಿದೆ. ಈ ಕಾಗದವನ್ನು ಎಲ್ಲಿ ಬಳಸಬೇಕೆಂದು ವಿವರಿಸಬೇಕಾದ ಅಗತ್ಯವಿಲ್ಲ” ಎಂದು ಮೆದ್ವೆದೆವ್ ಅವರು ಟಾಯ್ಲೆಟ್ ಪೇಪರ್’ನ ಇಮೋಜಿ ಜೊತೆಗೆ ಟ್ವೀಟ್ ಮಾಡಿದ್ದಾರೆ.
ಪುತಿನ್ ಅವರು ಉಕ್ರೇನ್’ನಲ್ಲಿ ಯುದ್ಧಾಪರಾಧ ಎಸಗಿದ್ದಾರೆ ಎನ್ನುತ್ತಿದೆ ಐಸಿಸಿ. ಅದೇ ವೇಳೆ ರಷ್ಯಾದ ಮಕ್ಕಳ ಹಕ್ಕುಗಳ ಆಯುಕ್ತೆ ಮರಿಯಾ ಅಲೆಕ್ಸೆಯೇವ್ನಾರ ಬಂಧನಕ್ಕೂ ಐಸಿಸಿ ಇದೇ ಕಾರಣದ ಮೇಲೆ ಬಂಧನದ ವಾರಂಟ್ ಹೊರಡಿಸಿದೆ.
ರಷ್ಯಾವು ಉಕ್ರೇನಿನಲ್ಲಿ ಅಪರಾಧ ಮಾಡಿಲ್ಲ; ಯುದ್ಧಕೋರರ ವಿರುದ್ಧ ಯುದ್ಧ ಮಾಡುತ್ತಿದೆ ಎಂದು ರಷ್ಯಾ ಹೇಳಿದೆ.
ವಿಶ್ವ ಸಂಸ್ಥೆಯ ತನಿಖಾ ತಂಡವು ಉಕ್ರೇನಿನಲ್ಲಿ ಯುದ್ಧಾಪರಾಧ ಮಾಡಿದ ಬೆನ್ನಿಗೆ ಈ ವಾರಂಟ್ ಹೊರಟಿದೆ. ಯುದ್ಧದಲ್ಲಿ ಮಕ್ಕಳನ್ನು ಬಳಸಿ ಜನಾಂಗೀಯ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಉಕ್ರೇನ್ ಸೇನೆಗೆ ರಷ್ಯಾ ಎದುರೇಟು ನೀಡಿದೆ ಅಷ್ಟೇ ಎಂದು ರಷ್ಯಾ ಉತ್ತರಿಸಿದೆ.
ರಷ್ಯಾವು ರೋಮ್ ಶಾಸನ ಐಸಿಸಿ ಒಪ್ಪಂದಕ್ಕೆ 2000ದಲ್ಲಿ ಸಹಿ ಮಾಡಿತು. ಆದರೆ ಅದರ ಸದಸ್ಯತನದ ವಿಧಿ ಪೂರೈಸಲೇ ಇಲ್ಲ. 2016ರಲ್ಲಿ ಕ್ರಿಮಿಯಾವನ್ನು ರಷ್ಯಾ ಸೇರಿಸಿಕೊಂಡಿದೆ ಎಂದು ಐಸಿಸಿ ವರದಿ ಪ್ರಕಟಿಸುತ್ತಲೇ ರಷ್ಯಾವು ಐಸಿಸಿಯಿಂದ ಸಂಪೂರ್ಣವಾಗಿ ಹೊರಗೆ ಬಂದಿದೆ.
2022ರಿಂದ ಉಕ್ರೇನ್ ಜೊತೆಗೆ ಯುದ್ಧಾರಂಭವಾದ ಮೇಲೆ ರಶಿಯಾವು ಇನ್ನೂ ಹತ್ತಾರು ಅಂತಾರಾಷ್ಟ್ರೀಯ ಸಂಘಟನೆಗಳಿಂದ ಹೊರಗೆ ಬಂದಿದೆ.

Join Whatsapp