ಸಿಂಗಾಪುರ: ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆ ಕುರಿತ ವಿವಾದಾತ್ಮಕ ಭಾರತೀಯ ಚಲನಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನವನ್ನು ಸಿಂಗಾಪುರ ಸರ್ಕಾರ ನಿಷೇಧಿಸಿದೆ. ಈ ಚಿತ್ರವು “ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಸಂಭಾವ್ಯತೆಯ” ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ.
“ದಿ ಕಾಶ್ಮೀರ್ ಫೈಲ್ಸ್” ಅನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಲಪಂಥೀಯ ಹಿಂದೂ ರಾಷ್ಟ್ರೀಯತಾವಾದಿ ಅನುಯಾಯಿಗಳು ಹೊಗಳಿದ್ದಾರೆ. ಆದರೆ ವಿಮರ್ಶಕರು ಇದು ಮುಸ್ಲಿಂ ವಿರೋಧಿ ಭಾವನೆಯನ್ನು ವ್ಯಕ್ತಪಡಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷವನ್ನು ಪ್ರಚೋದನಕಾರಿ ಮತ್ತು ಏಕಪಕ್ಷೀಯವಾಗಿ ತೋರಿಸಲಾಗಿದೆ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆಯಾಗಿ ಸಿಂಗಾಪುರ ಸರ್ಕಾರ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.