ಟೋಕಿಯೋ ಒಲಿಂಪಿಕ್ಸ್: ಬಿದ್ದು ಎದ್ದು ಗೆದ್ದ ಗಟ್ಟಿಗಿತ್ತಿ !

Prasthutha|

ಟೋಕಿಯೋ, ಆ.3: ಜೀವನದಲ್ಲಿ ಸೋತು ನಿರಾಶರಾದವರಿಗೆ ಟೋಕಿಯೋ ಒಲಿಂಪಿಕ್ಸ್ ನ ಮಹಿಳೆಯರ 1500 ಮೀಟರ್ ಓಟದ ಸ್ಪರ್ಧೆಯು ಬಹುದೊಡ್ಡ ಸಂದೇಶವೊಂದನ್ನು ನೀಡಿದೆ. ಸೋಮವಾರ ನಡೆದ ಅಥ್ಲೆಟಿಕ್ಸ್ ನ ಮಹಿಳೆಯರ 1500 ಮೀಟರ್ ಓಟದ ಸ್ಪರ್ಧೆಯ ಹೀಟ್ಸ್ ನಲ್ಲಿ ಡಚ್ ಓಟಗಾರ್ತಿ ಸಿಫನ್ ಹಸ್ಸನ್ ಸಾಹಸಕ್ಕೆ ಇಡೀ ವಿಶ್ವವೇ ತಲೆದೂಗಿದೆ.

- Advertisement -


1500 ಮೀಟರ್ ಸ್ಪರ್ಧೆಯ ಗುರಿ ಮುಟ್ಟಲು ಇನ್ನು 400 ಮೀಟರ್ ದೂರ ಇರುವಾಗ ಇಥಿಯೋಪಿಯಾ ಮೂಲದ ಸಿಫನ್ಹಸ್ಸನ್ ಹಾಗೂ ಕೀನ್ಯಾದ ಎಡಿನಾಹ್ ಜೆಬಿಟೊಕ್ ಎಡವಿ ಬಿದ್ದರು. ಆದರೆ ಬಿದ್ದಲ್ಲೇ ಬಿಕ್ಕಳಿಸುತ್ತಾ ಕುಳಿತುಕೊಳ್ಳುವ ಬದಲು ಇಬ್ಬರೂ ಛಲಗಾತಿಯರು ಮತ್ತೆ ಟ್ರ್ಯಾಕ್ ನಲ್ಲಿ ಓಟ ಮುಂದುವರಿಸಿದರು. ಉಳಿದ ಸ್ಪರ್ಧಿಗಳ ನಡುವಿನ ಅಂತರವೂ ಹೆಚ್ಚಿತ್ತು. ಆದರೆ ಗುರಿಮುಟ್ಟುವ ಹಠವ ಬಿಡದ ಸಿಫನ್ ಹಸ್ಸನ್, 4 ನಿಮಿಷ 517 ಸೆಕಂಟ್ಗಳಲ್ಲಿ ಫಿನಿಶಿಂಗ್ ಪಾಯಿಂಟ್ ನಲ್ಲಿ ತಮ್ಮ ಕಾಲು ನೆಲಕ್ಕೂರುವ ಮೂಲಕ ಪ್ರಥಮ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದ್ದರು. ಆ ಮೂಲಕ ಸೆಮಿಫೈನಲ್ ಗೆ ಅರ್ಹತೆಯನ್ನೂ ಪಡೆದರು.


ಇಷ್ಟೇ ಅಲ್ಲ, 1500 ಮೀಟರ್ ಹೀಟ್ಸ್ ಸ್ಪರ್ಧೆಯ ಬಳಿಕ ನಡೆದ 5 ಸಾವಿರ ಮೀಟರ್ ಸ್ಪರ್ಧೆಯಲ್ಲಿ ಸಿಫನ್ ಹಸ್ಸನ್ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. 10 ಸಾವಿರ ಮೀಟರ್ ಸ್ಪರ್ಧೆಯಲ್ಲೂ ಡಚ್ ಓಟಗಾರ್ತಿ ಟ್ರ್ಯಾಕ್ ಗಿಳಿಯಲಿದ್ದಾರೆ.

Join Whatsapp