28 ತಿಂಗಳು ಮಾತ್ರವಲ್ಲ 28 ವರ್ಷ ಜೈಲಿಗೆ ಹಾಕಿದರೂ ನನ್ನ ಹೋರಾಟ ಮುಂದುವರಿಯಲಿದೆ: ಸಿದ್ದೀಕ್ ಕಾಪ್ಪನ್

Prasthutha|

► ಯುಎಪಿಎಯಂತಹ ಕಠೋರ ಕಾನೂನು ಬಗ್ಗೆ ಕಳೆದ 10-15 ವರ್ಷಗಳಲ್ಲಿ ಬರೆಯುತ್ತಿದ್ದ ನಾನು ಅದೇ ಕಾನೂನಿನ ಬಲಿಪಶುವಾದೆ

- Advertisement -


► ಮಹಾತ್ಮ ಗಾಂಧಿ, ಭಗತ್ ಸಿಂಗ್ ಅವರನ್ನು ಕೂಡ ಭಯೋತ್ಪಾದಕರು ಎಂದು ಕರೆಯಲಾಗಿತ್ತು


► ಪತ್ರಕರ್ತರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳಿಗೆ ಚಿರಋಣಿ

- Advertisement -

ಲಕ್ನೋ: ಒಂದು ಒಳ್ಳೆಯ ಉದ್ದೇಶಕ್ಕಾಗಿ ಕೆಲಸ ಮಾಡಿದ್ದರಿಂದ 28 ತಿಂಗಳು ಕಾಲ ಜೈಲಿನಲ್ಲಿ ಕಳೆಯಬೇಕಾಯಿತು. ಇದರಲ್ಲಿ ನನಗೆ ಯಾವುದೇ ಬೇಸರವಾಗಲೀ, ನೋವಾಗಲೀ ಇಲ್ಲ. ನನ್ನ ಹೋರಾಟ ಮುಂದುವರಿಯಲಿದೆ ಎಂದು ಹತ್ರಾಸ್ ಪ್ರಕರಣದ ವರದಿಗಾಗಿ ತೆರಳುತ್ತಿದ್ದಾಗ ಸುಳ್ಳು ಪ್ರಕರಣದಡಿ ಬಂಧಿತನಾಗಿ ಜೈಲಿನಿಂದ ಬಿಡುಗಡೆಯಾದ ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಹೇಳಿದ್ದಾರೆ.


ಉತ್ತರ ಪ್ರದೇಶದ ಲಕ್ನೋ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬಹಳ ಸಂತಸದ ದಿನ. 28 ತಿಂಗಳನ್ನು ಜೈಲಿನಲ್ಲಿ ಕಳೆದಿದ್ದೇನೆ. ಯುಎಪಿಎಯಂತಹ ಕಠೋರ ಕಾನೂನು ಬಗ್ಗೆ ಕಳೆದ 10-15 ವರ್ಷಗಳಲ್ಲಿ ಬರೆಯುತ್ತಿದ್ದ ನಾನು ಅದೇ ಕಾನೂನಿನ ಬಲಿಪಶುವಾಗಿದ್ದೇನೆ. ಕ್ಯಾನ್ಸರ್ ತಜ್ಞ ಅದೇ ಕ್ಯಾನ್ಸರ್ ರೋಗಕ್ಕೆ ಬಲಿಯಾದಂತಾಗಿದೆ ನನ್ನ ಪರಿಸ್ಥಿತಿ ಎಂದು ಸಿದ್ದೀಕ್ ಕಾಪ್ಪನ್ ಹೇಳಿದರು.


ಭಯೋತ್ಪಾದನೆ, ಉಗ್ರ ಮುಂತಾದ ಸುಳ್ಳು ಆರೋಪಗಳಡಿ 28 ತಿಂಗಳು ಜೈಲಿನಲ್ಲಿ ಕಳೆದೆ. ಪತ್ರಕರ್ತರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಬೆಂಬಲದಿಂದಾಗಿ ಇಷ್ಟು ಬೇಗ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಾಯಿತು ಎಂದು ನಾನು ನಂಬಿದ್ದೇನೆ ಎಂದರು.
ತಾಯಿಯನ್ನು ಭೇಟಿಯಾದ ಸಂದರ್ಭದಲ್ಲಿ ನನ್ನೊಂದಿಗೆ ಮಾತನಾಡಲು ಸಾಧ್ಯವಿಲ್ಲದಷ್ಟು ಅವರು ಅನಾರೋಗ್ಯಪೀಡಿತರಾಗಿದ್ದರು. ನಾನು ಬಂದಿದ್ದೇನೆ ಎಂಬ ಅರಿವೂ ಕೂಡ ತಾಯಿಗೆ ಇರಲಿಲ್ಲ. ಈ ಹಿಂದೆ ಹಲವು ಬಾರಿ ನನ್ನೊಂದಿಗೆ ತಾಯಿ, “ನನಗೆ ಏನಾದರೂ ಸಂಭವಿಸಿದರೆ ತಕ್ಷಣ ಬರಲು ನಿನಗೆ ಸಾಧ್ಯವಾಗಬಹುದೇ?” ಎಂದು ಪ್ರಶ್ನಿಸಿದ್ದರು. ಅಂತಹ ತಾಯಿ ಇಲ್ಲದ ಜಗತ್ತಿಗೆ ಬಂದಿದ್ದೇನೆ ಎಂದು ಇದೇ ವೇಳೆ ತಾಯಿಯನ್ನು ಸ್ಮರಿಸಿದರು.


ಒಂದು ಒಳ್ಳೆಯ ಕೆಲಸಕ್ಕಾಗಿ ನಾನು 28 ತಿಂಗಳು ಜೈಲಿನಲ್ಲಿ ಕಳೆದೆ ಎಂಬ ಸಂತೋಷ ನನಗಿದೆ. ಓರ್ವ ದಲಿತ ಯುವತಿಗೆ ನ್ಯಾಯ ಸಿಗಬೇಕು ಎಂಬ ಹೋರಾಟದಲ್ಲಿ, ಹತ್ರಾಸ್ ಘಟನೆ ಹೊರಜಗತ್ತಿಗೆ ತಿಳಿಸಬೇಕು ಎಂಬ ಉದ್ದೇಶದಿಂದ ಅಲ್ಲಿಗೆ ವರದಿ ಮಾಡಲು ತೆರಳಿದ್ದಾಗ ನನ್ನನ್ನು ಮಾರ್ಗಮಧ್ಯೆ ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿತ್ತು. ದಲಿತರು, ತುಳಿತಕ್ಕೊಳಗಾದವರು ಹಾಗೂ ಯುಎಪಿಎಯಂತಹ ಕಠೋರ ಕಾನೂನುಗಳ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ. ಪತ್ರಕರ್ತನಾಗಿಯೂ ಮುಂದುವರಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.
28 ತಿಂಗಳು ಮಾತ್ರವಲ್ಲ 28 ವರ್ಷ ಜೈಲಿಗೆ ಹಾಕಿದರೂ ಈ ಹೋರಾಟ ಮುಂದುವರಿಯಲಿದೆ. ನೆಲ್ಸನ್ ಮಂಡೇಲಾ ಅವರಂತಹ ನಾಯಕರನ್ನು 27 ವರ್ಷಗಳ ಕಾಲ ಜೈಲಿಗೆ ಹಾಕಲಾಗಿತ್ತು ಎಂದು ಹೇಳಿದ ಸಿದ್ದೀಕ್ ಕಾಪ್ಟನ್, ನನ್ನ ಹೋರಾಟದಲ್ಲಿ ಪತ್ನಿ, ಮಕ್ಕಳು, ಪತ್ರಕರ್ತರು, ಪ್ರಗತಿಪರರು ನನ್ನ ಬೆಂಬಲಕ್ಕೆ ನಿಂತಿದ್ದರು. ಕಪಿಲ್ ಸಿಬಲ್, ವಿಲ್ಸನ್ ಮ್ಯಾಥ್ಯೂ ಸೇರಿದಂತೆ ಒಳ್ಳೆಯ ವಕೀಲರ ತಂಡ ಕೂಡ ನನಗೆ ಸಹಕಾರ ನೀಡಿದೆ, ಅವರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ ಎಂದು ಹೇಳಿದರು.


ಅಕ್ಟೋಬರ್ 5ರಂದು ನನ್ನನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಈ ವಿಷಯವನ್ನು ಯಾರಿಗೂ ಪೊಲೀಸರು ತಿಳಿಸಿರಲಿಲ್ಲ. ಆದರೆ ಅಕ್ಟೋಬರ್ 6ರಂದೇ ಪತ್ರಕರ್ತರ ಸಂಘಟನೆಗಳ ಮೂಲಕ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಲಾಯಿತು. ಇದು ಕೂಡ ನನ್ನ ಬಿಡುಗಡೆಗೆ ಸಹಕಾರಿಯಾಯಿತು ಎಂದರು.
ತಾಯಿ ಈ ಭೂಮಿಯಲ್ಲಿ ಇಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಸತ್ಯಕ್ಕೆ ಯಾವತ್ತೂ ಜಯಸಿಗಲಿದೆ. ಮಹಾತ್ಮ ಗಾಂಧಿ, ಭಗತ್ ಸಿಂಗ್ ಅವರನ್ನು ಕೂಡ ಭಯೋತ್ಪಾದಕ ಎಂದು ಕರೆಯಲಾಗಿತ್ತು. ಒಂದೊಂದು ಕಾಲದಲ್ಲಿ ಒಬ್ಬೊಬ್ಬರನ್ನು ಭಯೋತ್ಪಾದಕ ಎಂದು ಗುರಿಪಡಿಸಲಾಗುತ್ತಿದೆ. ಈ ಹೆಸರಿನಲ್ಲಿ ಯಾರನ್ನೂ ಯಾವ ಹೋರಾಟವನ್ನೂ ಸದೆಬಡಿಯಲು ಸಾಧ್ಯವಿಲ್ಲ ಎಂದು ಹೇಳಿದರು.

Join Whatsapp