ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ RSS ಬಗ್ಗೆ ಭಯ ಸಹಜ: ಸದಾನಂದಗೌಡರಿಗೆ ಸಿದ್ದು ತಿರುಗೇಟು

Prasthutha|

ಬೆಂಗಳೂರು: ಸಿದ್ದರಾಮಯ್ಯರಿಗೆ ಆರೆಸ್ಸೆಸ್ ಕಂಡರೆ ಭಯ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಸದಾನಂದಗೌಡರಿಗೆ ತಿರುಗೇಟು ನೀಡಿರುವ ಸಿದ್ದು, ತಮ್ಮ ಮಕ್ಕಳಿಗೆ ದೇಶ-ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಿ, ದಲಿತ, ಹಿಂದುಳಿದ ಸಮುದಾಯದ ಬಡವರ ಮಕ್ಕಳನ್ನು ಹಿಂಸಾಚಾರಕ್ಕೆ ಇಳಿಸಿ ಜೈಲಿಗೆ ಅಟ್ಟುವ ಆರೆಸ್ಸೆಸ್ ಬಗ್ಗೆ ಭಯ ಸಹಜ ಅಲ್ಲವೇ ಎಂದು ಕುಟುಕಿದ್ದಾರೆ.

- Advertisement -

ಫೇಸ್ ಬುಕ್ ಮೂಲಕ ಮತ್ತೆ ಆರೆಸ್ಸೆಸ್ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ, ಆರೆಸ್ಸೆಸ್ ಕಂಡರೆ ನನಗೆ ಭಯ ಎಂದು‌ ಮಾಜಿ‌ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಹೇಳಿರುವುದು ನೂರಕ್ಕೆ ನೂರರಷ್ಟು ಸತ್ಯ. ನನಗೆ ಮಾತ್ರವಲ್ಲ ಜಾತ್ಯತೀತತೆ, ಸೌಹಾರ್ದತೆ ಮತ್ತು ಅಹಿಂಸೆಯ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಭಾರತೀಯನಿಗೂ ಆರೆಸ್ಸೆಸ್ ಕಂಡರೆ ಭಯ ಇದೆ ಎಂದು ಹೇಳಿದ್ದಾರೆ.

ಭಯ ಹುಟ್ಟಿಸುವವರನ್ನು ಸಾಮಾನ್ಯ ಭಾಷೆಯಲ್ಲಿ ಭಯೋತ್ಪಾದಕರು ಎನ್ನಲಾಗುತ್ತಿದೆ. ಡಿ.ವಿ.ಸದಾನಂದಗೌಡರು ಯಾಕೆ ತನ್ನ‌ ಮಾತೃ ಸಂಸ್ಥೆಯ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು. ಆರೆಸ್ಸೆಸ್ ಬಗೆಗಿನ ಭಯದ ಕಾರಣದಿಂದಾಗಿಯೇ ಮಹಾತ್ಮ ಗಾಂಧೀಜಿಯವರ ಹತ್ಯೆಯ ನಂತರ ಆರೆಸ್ಸೆಸ್ ಮೇಲೆ ದೇಶದ ಮೊದಲ ಗೃಹಸಚಿವ‌ ವಲ್ಲಭಭಾಯಿ‌ ಪಟೇಲ್ ಅವರು ನಿಷೇಧ ಹೇರಿದ್ದು ಎನ್ನುವುದು ನೆನಪಿರಲಿ ಎಂದಿದ್ದಾರೆ.

- Advertisement -

ಉನ್ನತ ಪದಾಧಿಕಾರದಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳಾದ ದಲಿತರು ಮತ್ತು ಹಿಂದುಳಿದ ಜಾತಿಗಳನ್ನು ದೂರ ಇಟ್ಟಿರುವ ಕಾರಣಕ್ಕಾಗಿಯೇ ಈ‌ ಸಮುದಾಯಗಳಂತೆ ನನಗೂ ಆರೆಸ್ಸೆಸ್ ಬಗ್ಗೆ ಭಯ ಇದೆ. ಮೀಸಲಾತಿ, ಭೂಸುಧಾರಣೆಯಂತಹ ಬಹುಸಂಖ್ಯೆಯ ಹಿಂದೂಗಳೇ ಫಲಾನುಭವಿಗಳಾಗಿರುವ ಸಾಮಾಜಿಕ ನ್ಯಾಯದ ಕಾನೂನುಗಳನ್ನೇ ವಿರೋಧಿಸುವ ಆರೆಸ್ಸೆಸ್ ಬಗ್ಗೆ ಭಯವಲ್ಲದೆ ಪ್ರೀತಿ ಇರಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯಾವುದೇ ವ್ಯಕ್ತಿ-ಸಿದ್ದಾಂತ- ಸಂಸ್ಥೆ ಇತರರಲ್ಲಿ ಗೌರವ ಹುಟ್ಟಿಸಬೇಕೇ ಹೊರತು ಭಯ ಹುಟ್ಟಿಸುವುದಲ್ಲ. ಈ ಬಗ್ಗೆ‌ ಆತ್ಮಾವಲೋಕನ‌ ಮಾಡಬೇಕಾದವರು ಭಯವನ್ನು ಉತ್ಪಾದಿಸುವವರೇ ಹೊರತು ಭಯ ಪಡುವವರಲ್ಲ. ಆರೆಸ್ಸೆಸ್ಸ್ ಉನ್ನತ ಪದಾಧಿಕಾರ ಯಾಕೆ ಒಂದು ಜಾತಿಗೆ ಸೀಮಿತವಾಗಿದೆ? ಯಾಕೆ ಅಲ್ಲಿ ಹಿಂದುಗಳೇ ಆಗಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಲ್ಲ?ಎನ್ನುವ ನನ್ನ ಸರಳ ಪ್ರಶ್ನೆಗೆ ಯಾಕೆ, ಯಾರೂ ಉತ್ತರಿಸುತ್ತಿಲ್ಲ ಎಂದು ಆರೆಸ್ಸೆಸ್ ನಾಯಕರ ವಿರುದ್ಧ ಸಿದ್ದು ಹರಿಹಾಯ್ದಿದ್ದಾರೆ.

Join Whatsapp