ಹೋರಾಟವನ್ನು ದಾಳಿ ಎಂದು ಬಿಂಬಿಸುವ ಸರ್ಕಾರದ ನಡೆ ಖಂಡನೀಯ; ಬಂಧಿತ NSUI ವಿದ್ಯಾರ್ಥಿ ನಾಯಕರನ್ನು ಶೀಘ್ರ ಬಿಡುಗಡೆಗೊಳಿಸಿ: CFI

Prasthutha|

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಎನ್ ಎಸ್ ಯು ಐ ಶಿಕ್ಷಣ ಸಚಿವರ ಮನೆ ಮುಂದೆ ನಡೆಸಿದ ಪ್ರತಿಭಟನೆಯನ್ನು ದಾಳಿ ಎಂದು ಬಿಂಬಿಸುವ ಮುಖಾಂತರ ರಾಜ್ಯ ಸರ್ಕಾರ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ನಡೆಸುತ್ತಿದೆ, ಇದನ್ನು ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ ಎಂದು ಸಿಎಫ್ ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಹೇಳಿದ್ದಾರೆ.

- Advertisement -

ಸಂವಿಧಾನ ಬಾಹಿರವಾಗಿ ಪಠ್ಯ ಪರಿಷ್ಕರಣೆ ನಡೆಸಿದ್ದು, ಕುವೆಂಪುರವರಿಗೆ ಅವಮಾನಗೈದ ರೋಹಿತ್ ಚಕ್ರತೀರ್ಥರಂತಹ ವ್ಯಕ್ತಿಯ ಮೇಲೆ ಇನ್ನೂ ಕ್ರಮ ಕೈಗೊಳ್ಳಲು ಸಾಧ್ಯವಾಗದ ರಾಜ್ಯ ಸರ್ಕಾರ ಇದೀಗ ಇದರ ವಿರುಧ್ದ ಧ್ವನಿಯೆತ್ತುವಂತಹವರನ್ನು ಗುರಿಯಾಗಿಸುತ್ತಿರುವುದು ತಮ್ಮ ಸರ್ಕಾರದ ಹೇಡಿತನವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಕನ್ನಡಿಗರಿಗೆ ಒಪ್ಪಲು ಸಾಧ್ಯವಿಲ್ಲ, ಇದೇ ಹಠಮಾರಿ ಧೋರಣೆಯನ್ನು ರಾಜ್ಯ ಸರ್ಕಾರ ವ್ಯಕ್ತಪಡಿಸಿದರೆ ವಿದ್ಯಾರ್ಥಿ ಹೋರಾಟವು ಇನ್ನೂ ತೀವ್ರತೆಯನ್ನು ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು. ಇದೀಗಾಗಲೇ ಸಂವಿಧಾನಾತ್ಮಕವಾಗಿ ಪ್ರತಿಭಟಿಸಿದ ಬಂಧಿತ ವಿದ್ಯಾರ್ಥಿ ನಾಯಕರನ್ನು ಶೀಘ್ರ ಬಿಡುಗಡೆಗೊಳಿಸಬೇಕೆಂದು ಅಥಾವುಲ್ಲ ಆಗ್ರಹಿಸಿದ್ದಾರೆ.

Join Whatsapp