ಒಳಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಹಿಪಾಕ್ರಟಿಕ್ ನಡೆ ಬಯಲು: ಸಿದ್ದರಾಮಯ್ಯ

Prasthutha|

ಬೆಂಗಳೂರು: ಒಳಮೀಸಲಾತಿ ಜಾರಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಮೂಲಕ ಹರಿಹಾಯ್ದಿದ್ದಾರೆ.

- Advertisement -

‘ಸಂವಿಧಾನದಲ್ಲಿ ಒಳಮೀಸಲಾತಿಗೆ ಅವಕಾಶ ಇಲ್ಲ’ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ನಾರಾಯಣಸ್ವಾಮಿಯವರು ರಾಜ್ಯಸಭೆಗೆ ತಿಳಿಸಿದ್ದು, ಈ ಮೂಲಕ ಒಳಮೀಸಲಾತಿಗೆ ಡಬಲ್ ಎಂಜಿನ್ ಸರ್ಕಾರ ಬದ್ಧವಾಗಿದೆ ಎಂಬ ಬಿಜೆಪಿಯ ಹಿಪಾಕ್ರಟಿಕ್ ನಡವಳಿಕೆ ಬಯಲಾಗಿದೆ ಎಂದು ಟ್ವೀಟ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

“ಒಳಮೀಸಲಾತಿ ವಿಷಯದ ಕಟ್ಲೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿ ವಿಷಯವನ್ನು ಏಳು ನ್ಯಾಯಾಧೀಶರ ಪೀಠಕ್ಕೆ ವರ್ಗಾವಣೆ ಮಾಡಬೇಕೆಂದು ಮುಖ್ಯನ್ಯಾಯಮೂರ್ತಿಯನ್ನು ಕೋರಿದ್ದಾರೆ. ಇದರಿಂದಾಗಿ ಇದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ‘ಸಬ್ ಜುಡೀಸ್’ ಆಗುತ್ತದೆ ಎಂದು ಬಿಜೆಪಿ ಸದಸ್ಯ ಜಿ.ವಿ.ಎಲ್. ನರಸಿಂಹರಾವ್ ಅವರ ಪ್ರಶ್ನೆಗೆ ನೀಡಿರುವ ಉತ್ತರದಲ್ಲಿ ಸಚಿವ ನಾರಾಯಣ ಸ್ವಾಮಿ ಜಾರಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

- Advertisement -

“ಒಳ ಮೀಸಲಾತಿಗಾಗಿ ಸಂವಿಧಾನದ 341ನೇ ಪರಿಚ್ಚೇದಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ ಎಂದು ಈ ಉದ್ದೇಶಕ್ಕಾಗಿಯೇ ರಚಿಸಲಾಗಿರುವ ರಾಷ್ಟ್ರೀಯ ಆಯೋಗ ಶಿಫಾರಸು ಮಾಡಿತ್ತು. ಈ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಅಭಿಪ್ರಾಯಗಳನ್ನು ನೀಡಲು ಕೋರಲಾಗಿತ್ತು. ಆದರೆ ಇಲ್ಲಿಯವರೆಗೆ 20 ರಾಜ್ಯ ಸರ್ಕಾರಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ತಮ್ಮ ಅಭಿಪ್ರಾಯವನ್ನು ತಿಳಿಸಿದೆ’  ಎಂದು ಹೇಳಿದ್ದಾರೆ.

ಈ 20 ರಾಜ್ಯಗಳಲ್ಲಿ ಏಳು ರಾಜ್ಯಗಳು ಮಾತ್ರ ಒಳಮೀಸಲಾತಿಗೆ ಒಪ್ಪಿಗೆ ಸೂಚಿಸಿದ್ದು, ಉಳಿದ 13 ರಾಜ್ಯಗಳು ವಿರೋಧಿಸಿವೆ ಎಂದು ಹೇಳುವ ಮೂಲಕ ಬಹುಸಂಖ್ಯಾತ ರಾಜ್ಯಗಳು ಒಳಮೀಸಲಾತಿಗೆ ವಿರುದ್ಧವಾಗಿವೆ ಎಂಬ ಸೂಚನೆಯನ್ನೂ ಸಚಿವ ನಾರಾಯಣ ಸ್ವಾಮಿ ನೀಡಿದ್ದಾರೆ.

ಒಳಮೀಸಲಾತಿ ಜಾರಿಗೆ ತಮ್ಮ ಪಕ್ಷ ಬದ್ಧವಾಗಿದ್ದು, ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲಿಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭರವಸೆ ನೀಡಿದ್ದ ಬಿಜೆಪಿ ನಾಯಕರು ಆ ಸಮಯದಲ್ಲಿ ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದಾಗಲಿ, ಈ ಬಗ್ಗೆ ಕೈಗೊಳ್ಳುವ ನಿರ್ಧಾರ ಸಬ್ ಜುಡಿಸ್ ಆಗುತ್ತದೆ ಎಂದಾಗಲಿ ಯಾಕೆ ಹೇಳಿಲ್ಲ? ಎಂದು ಪ್ರಶ್ನಿಸಿದ್ದಾರೆ.

2020ರ ಆಗಸ್ಟ್ ತಿಂಗಳಲ್ಲಿಯೇ ಐವರು ನ್ಯಾಯಾಧೀಶರ ಪೀಠವು ಏಳು ನ್ಯಾಯಾಧೀಶರ ಪೀಠ ರಚಿಸುವಂತೆ ಕೋರಿಕೆ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾಕೆ ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿಲ್ಲ? ಇದೇ ವಿಷಯವನ್ನು ನಾವು ಪ್ರಶ್ನಿಸಿದಾಗ ಸಂವಿಧಾನಕ್ಕೆ ತಿದ್ದುಪಡಿ ಮಾಡದೆಯೇ ಒಳಮೀಸಲಾತಿ ಜಾರಿಗೊಳಿಸುವುದಾಗಿ ಸುಳ್ಳು ಭರವಸೆ ನೀಡಿದ್ದು ಯಾಕೆ? ಬಹಿರಂಗವಾಗಿ ದಲಿತ ಸಮುದಾಯದ ಬಗ್ಗೆ ಹುಸಿಪ್ರೀತಿ-ಕಾಳಜಿ ವ್ಯಕ್ತಪಡಿಸುವ ಬಿಜೆಪಿ ಮತ್ತು ಸಂಘ ಪರಿವಾರ, ಅಂತರಂಗದಲ್ಲಿ ಮೀಸಲಾತಿಯೂ ಸೇರಿದಂತೆ ಸಾಮಾಜಿಕ ನ್ಯಾಯದ ಯಾವುದೇ ಉಪಕ್ರಮಗಳಿಗೆ ವಿರುದ್ಧವಾಗಿದೆ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp