ಟಿಪ್ಪುವನ್ನು ವಿರೋಧಿಸುವ ಆರೆಸ್ಸೆಸ್ ಯಾವತ್ತೂ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿಲ್ಲ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಧರ್ಮದ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವ ಆರೆಸ್ಸೆಸ್ ಯಾವತ್ತೂ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ ಆರೆಸ್ಸೆಸ್ ನ ಒಬ್ಬನಾದರೂ ಸತ್ತಿರುವ ಉದಾಹರಣೆ ಇದ್ದರೆ ಬಹಿರಂಗಪಡಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಸವಾಲೆಸೆದರು.

- Advertisement -

ಬ್ರಿಟಿಷರ ವಿರುದ್ಧ ರಾಜಿ ರಹಿತವಾಗಿ ಹೋರಾಡಿ, ಅವರಿಗೆ ಯಾವತ್ತೂ ತಲೆ ತಗ್ಗಿಸದೆ ತಮ್ಮ ಮಕ್ಕಳನ್ನೇ ಒತ್ತೆ ಇಟ್ಟ ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ತನ್ನ ಆಸ್ಥಾನದಲ್ಲಿ ಹಿಂದೂಗಳನ್ನು ದೀವಾನರಾಗಿ ನೇಮಿಸಿದ ಟಿಪ್ಪು ಮಹಾನ್ ಜಾತ್ಯತೀತ ಮತ್ತು ಜನನಾಯಕ ಎಂದು ಸಿದ್ದರಾಮಯ್ಯ ಕೊಂಡಾಡಿದರು. ಮಾತ್ರವಲ್ಲ ಉಳುವವನೇ ಭೂ ಒಡೆಯ ಎಂಬ ಕಾನೂನನ್ನು ಮೊದಲ ಬಾರಿಗೆ ಹೈದರಾಲಿ ಜಾರಿಗೆ ತಂದಿದ್ದರು. ಕನ್ನಂಬಾಡಿ ಕಟ್ಟೆಗೆ ಅಡಿಗಲ್ಲು ಹಾಕಿಸಿದ್ದು ಇದೇ ಟಿಪ್ಪು. ಮಾತ್ರವಲ್ಲ ಶೃಂಗೇರಿ ಸೇರಿ ಹಲವು ಮಠ, ಮಂದಿರಗಳಿಗೆ ಟಿಪ್ಪು ರಕ್ಷಣೆ, ನೆರವು ನೀಡಿರುವುದಕ್ಕೆ ಅಪಾರ ದಾಖಲೆಗಳಿವೆ ಎಂದು ಸಿದ್ದರಾಮಯ್ಯ ಸಾಂದರ್ಭಿಕವಾಗಿ ತಿಳಿಸಿದರು.

- Advertisement -

ಟಿಪ್ಪು ಎಲ್ಲೆಲ್ಲಾ ಮಸೀದ್ ಕಟ್ಟಿಸಿದ್ದರೋ ಅದರ ಪಕ್ಕದಲ್ಲೇ ದೇವಸ್ಥಾನಗಳನ್ನೂ ಕಟ್ಟಿಸಿರುವುದಕ್ಕೆ ಸಾಕಷ್ಟು ದಾಖಲೆಗಳಿವೆ. ಜಾತಿಯತೆ ಮತ್ತು ಮತಾಂಧತೆಯನ್ನು ಮೈಗೂಡಿಸಿರುವ ಆರೆಸ್ಸೆಸ್, ಟಿಪ್ಪು ಅವರನ್ನು ವಿರೋಧಿಸುತ್ತದೆ. ಇದಕ್ಕೆ ನಾನು ಮಣೆ ಹಾಕುವುದಿಲ್ಲ ಎಂದು ತಿರುಗೇಟು ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಟಿಪ್ಪು ಜಯಂತಿ ಆಚರಣೆ ಆರಂಭಿಸಿದ ಬಗ್ಗೆ ಹೆಮ್ಮೆಯ್ಯಿದೆ. ಭಾರತವನ್ನು ದಾಸ್ಯಕ್ಕೆ ದೂಡಿದ ಬ್ರಿಟಿಷರಾ ಪರವಾಗಿ ನಾವು ಇರಬೇಕೋ ?. ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಹೋರಾಡಿದ ಟಿಪ್ಪು ಸುಲ್ತಾನ್ ಪರವಾಗಿ ಇರಬೇಕೋ? ಎಂದು ಖಾರವಾಗಿ ಪ್ರಶ್ನಿಸಿದರು.
ಬ್ರಿಟಿಷರ ವಿರುದ್ಧ ಅವತ್ತೂ ಬಾಯಿ ಬಿಡದ, ಇವತ್ತೂ ಬಾಯ ಬಿಡದ ಆರ್‌ಎಸ್‌ಎಸ್ ಟಿಪ್ಪುವನ್ನು ವಿರೋಧಿಸುವುದು ಹಾಸ್ಯಾಸ್ಪದ ಎಂದು ತಿಳಿಸಿದರು.

ಮೈಸೂರು ಪ್ರಾಂತ್ಯಕ್ಕೆ ಟಿಪ್ಪು ಕೊಡುಗೆ ಅಪಾರವಾಗಿದೆ. ರೇಷ್ಮೆ ಬೆಳೆ ಆರಂಭಿಸಿದ್ದು ಟಿಪ್ಪು, ಆ ಕಾಲದಲ್ಲೇ ವಿದೇಶಿ ವಿನಿಮಯ ಪ್ರಾರಂಭಿಸಿ ವ್ಯಾಪಾರ ವಹಿವಾಟಿಗೆ ಮಹತ್ವ ನೀಡಿದ್ದಲ್ಲದೆ ಜಾತ್ಯತೀತ ಆಡಳಿತ ನೀಡಿ ಹಿಂದೂ ದಿವಾನರನ್ನು , ಮಂತ್ರಿಗಳನ್ನು ನೇಮಿಸಿಕೊಂಡು ಜನ ನಾಯಕ ಎನ್ನಿಸಿಕೊಂಡಿದ್ದರು.

ಹೀಗಾಗಿ ಆರ್‌ಎಸ್‌ಎಸ್ ಹೇಳುವ ಸುಳ್ಳುಗಳಿಗೆ ಸೊಪ್ಪಾಕುವ ಅಗತ್ಯ ಇಲ್ಲ. ಈ ದೇಶ 136 ಕೋಟಿ ಭಾರತೀಯರಿಗೂ ಸೇರಿದ್ದು. ಕೇವಲ ಒಂದು ಜಾತಿಯವರಿಗೆ, ಒಂದು ಧರ್ಮಕ್ಕೆ ಮಾತ್ರ ಈ ದೇಶ ಸೇರಿದ್ದಲ್ಲ. ಸಂಕುಚಿತ ಸಿದ್ಧಾಂತಕ್ಕಾಗಿ ಭಾರತೀಯರ ನಡುವೆ ಬಿರುಕು ತರಬಾರದು.

ರಾಜ್ಯ ಸರ್ಕಾರದ ಮತ್ತು ಬಿಜೆಪಿಯ ನಿದ್ದೆಗೆಡಿಸಿರುವ ಬಿಟ್ ಕಾಯಿನ್ ಹಗರಣದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿಯವರದ್ದೇ ಸರ್ಕಾರ ಇದೆ. ಪೊಲೀಸ್ ಮತ್ತು ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಬಿಟ್ ಕಾಯಿನ್ ಹಗರಣದಲ್ಲಿ ಸದ್ದಿಲ್ಲದೆ ಹಣ ತಿಂದ ಅಧಿಕಾರಿಗಳ ಮತ್ತು ರಾಜಕಾರಣಿಗಳ ಹೆಸರನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ಬಹಿರಂಗಪಡಿಸಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ತಾವು ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಹೆಸರೂ ಇದೆ ಎಂದು ಹೇಳಿಕೆ ನೀಡಿ ಜಾರಿಕೊಳ್ಳಬಾರದು.

ಕಾಂಗ್ರೆಸ್ಸಿನವರ ಹೆಸರಿದ್ದರೆ ಅವರ ಹೆಸರನ್ನೂ ಹೇಳಲಿ. ಅವರನ್ನೂ ಬಂಧಿಸಲಿ, ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದರು.

ದಲಿತ ಮುಖ್ಯಮಂತ್ರಿ ವಿಚಾರದ ಬಗ್ಗೆ ಬಿಜೆಪಿ ಸವಾಲಿಗೆ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಅತಿ ಹೆಚ್ಚು ಮಂದಿ ದಲಿತರು ಮುಖ್ಯಮಂತ್ರಿಗಳಾಗಿರುವ ಚರಿತ್ರೆ ಮತ್ತು ವರ್ತಮಾನ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಬಿಜೆಪಿಯಲ್ಲಿ ಯಾರೂ ದಲಿತರೇ ಇಲ್ಲವೇ ? ಈಗ ಅವರದೇ ಸರ್ಕಾರ ಇದೆ. ಬೊಮ್ಮಾಯಿ ಅವರನ್ನು ಕೆಳಗಿಳಿಸಿ ದಲಿತರನ್ನು ಮುಖ್ಯಮಂತ್ರಿ ಮಾಡಲಿ. ನಮ್ಮ ಸರ್ಕಾರ ಇರುವ ಪಂಜಾಬ್‌ನಲ್ಲಿ ನಾವು ದಲಿತ ಮುಖ್ಯಮಂತ್ರಿ ಮಾಡಿದ್ದೇವೆ. ಈಗ ಇಲ್ಲಿ ಬಿಜೆಪಿಯವರ ಸರ್ಕಾರ ಇದೆ. ಹೀಗಾಗಿ ಬಿಜೆಪಿಯರವರಿಗೆ ದಲಿತರನ್ನು ಮುಖ್ಯಮಂತ್ರಿ ಮಾಡಲು ಅವಕಾಶ ಇದೆ. ಮಾಡಿ ತೋರಿಸಲಿ ಎಂದು ಮರು ಸವಾಲು ಹಾಕಿದರು.



Join Whatsapp