ಡಿಕೆಶಿ ಬೆಂಬಲಿಗರ ಪಾದಯಾತ್ರೆ ತಡೆದ ಸಿದ್ದರಾಮಯ್ಯ ಅಭಿಮಾನಿಗಳು

Prasthutha|

ಅರಕಲಗೂಡು: ಮುಂಬರುವ ವಿಧಾನಸಭಾ ಚುನಾವಣೆಗೆ ತಾಲೂಕಿನಲ್ಲಿ ಕಾಂಗ್ರೆಸ್‍ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುವಂತೆಯೇ ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಮುಸುಕಿನ ಗುದ್ದಾಟ ಈಗ ಬೀದಿಗೆ ಬಂದಿದೆ.  ಕೆಲ ಅಭ್ಯರ್ಥಿಗಳು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಇನ್ನು ಕೆಲವರು ಡಿ.ಕೆ.ಶಿವಕುಮಾರ್‍ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

- Advertisement -

ಶುಕ್ರವಾರ ರಾತ್ರಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ದೊಡ್ಡಳ್ಳಿಯಲ್ಲಿ ಡಿ.ಕೆ.ಶಿಕುಮಾರ್ ಬೆಂಬಲಿಗರು ಕ್ಷೇತ್ರದ ಕಾಂಗ್ರೆಸ್‍ ಟಕೆಟ್‍ ಆಕಾಂಕ್ಷಿ ಶ್ರೀಧರ್‍ ಗೌಡ ನೇತೃತ್ವದಲ್ಲಿ ಮಾಡುತ್ತಿದ್ದ ಸ್ವಾತಂತ್ರೋತ್ಸವ ಪಾದಯಾತ್ರೆಯನ್ನು ಸಿದ್ದರಾಮಯ್ಯ ಅಭಿಮಾನಿಗಳು ತಡೆದಿದ್ದಾರೆ. ಸಿದ್ದರಾಮಯ್ಯ ಹುಟ್ಟುಹಬ್ಬ ಅಮೃತ ಮಹೋತ್ಸವ ಮುಗಿಯುವವರೆಗೆ ಪಾದಯಾತ್ರೆ ಮಾಡಬಾರದು ಎಂದು ಸಿದ್ದರಾಮಯ್ಯ ಅಭಿಮಾನಿಗಳು ತಾಕೀತು ಮಾಡಿದ್ದಾರೆ.

ಅರಕಲಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಶ್ರೀಧರ್ ಗೌಡ ಅವರ ನೇತೃತ್ವದಲ್ಲಿ ಪಾದಯಾತ್ರೆಯನ್ನು ಆರಂಭಿಸಿದ್ದರು. ಡಿ.ಕೆ. ಶಿವಕುಮಾರ್ ಬೆಂಬಲಿತ ನಾಯಕರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು. ನಿನ್ನೆ ಹೊಳೆನರಸೀಪುರ ತಾಲ್ಲೂಕಿನ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶ್ರವಣೂರಿನಿಂದ ಪಾದಯಾತ್ರೆ ಆರಂಭಿಸಲಾಗಿತ್ತು. ರಾತ್ರಿ ಕ್ಷೇತ್ರದ ದೊಡ್ಡಳ್ಳಿಯಲ್ಲಿಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಯ ಪಾದಯಾತ್ರೆಯನ್ನು ತಡೆದಿದ್ದು, ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಅಡ್ಡಿಪಡಿಸಲು ಪಾದಯಾತ್ರೆಗೆ ಹೊರಟಿದ್ದೀರಾ ಎಂದು ಆಕ್ರೋಶ ಹೊರಹಾಕಿದರು.

- Advertisement -

ಕಾಂಗ್ರೆಸ್ ಮುಖಂಡರಾದ ಶ್ರೀಧರ್ ಗೌಡ, ಶೇಷೇಗೌಡರಿಗೆ ರಸ್ತೆಯಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಪಾದಯಾತ್ರೆ ನಿಲ್ಲಿಸುವಂತೆ ತರಾಟೆ ತೆದುಕೊಂಡಿದ್ದರು. ಪಾದಯಾತ್ರೆ ಉದ್ದೇಶ ವಿವರಿಸಲು ಹೊರಟ ನಾಯಕರ ಜೊತೆ ಯುವಕರ ಗುಂಪೊಂದು ವಾಗ್ವಾದಕ್ಕೆ ಇಳಿದಿದ್ದು, ಕೂಡಲೇ ಪಾದಯಾತ್ರೆ ನಿಲ್ಲಿಸಿ ವಾಪಸ್ ತೆರಳಿ ಎಂದು ಎಚ್ಚರಿಕೆಯನ್ನು ನೀಡಿದರು. ಆಗ ಪಾದಯತ್ರೆಯಲ್ಲಿ ಭಾಗವಹಿಸಿದ್ದ ಮುಖಂಡರು ಯಾವುದೇ ದಾರಿ ಇಲ್ಲದೆ ಸ್ಥಳದಿಂದ ವಾಪಸ್ಸಾಗಿದ್ದಾರೆ.ಹೀಗೆ ಪ್ಲಾನ್ ಮಾಡಿಕೊಂಡು ಕಾಂಗ್ರೆಸ್ ನಲ್ಲಿ ಎರಡೆರಡು ಪ್ರತ್ಯೇಕ ಬಣಗಳಾಗಿ ಪಾದಯಾತ್ರೆ ನಡೆಸಲು ಸಜ್ಜಾಗಿದ್ದವು. ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬೆಂಬಲಿಗರಿಂದ ಪ್ರತ್ಯೇಕ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ.

ಸ್ವಾತಂತ್ರ್ಯೋತ್ಸವ, ಅಮೃತ ಮಹೋತ್ಸವ ಹೆಸರಿನಲ್ಲಿ ಕೆಪಿಸಿಸಿಯಿಂದ ಪಾದಯಾತ್ರೆಗೆ ಸೂಚನೆ ನೀಡಿದ್ದಾರೆ. ಆದರೆ ಸ್ಥಳೀಯವಾಗಿ ನಾಯಕರ ಬೆಂಬಲಿತ ಗುಂಪುಗಳಿಂದ ಪ್ರತ್ಯೇಕ ಪಾದಯಾತ್ರೆ ಆರಂಭಿಸಿದ್ದಾರೆ. ಹೀಗೆ ಡಿ.ಕೆ.ಶಿವಕುಮಾರ್ ಬಣದ ಮುಖಂಡರ ಪಾದಯಾತ್ರೆಗೆ ನಿನ್ನೆ ಸಿದ್ದರಾಮಯ್ಯ ಬೆಂಬಲಿಗರು ಅಡ್ಡಿಪಡಿಸಿದರು. ಕಾಂಗ್ರೆಸ್  ನಲ್ಲಿ ಮೊದಲಿನಿಂದಲೂ ಒಳ ರಾಜಕೀಯ ಇರಿಸುಮುರುಸುಗಳು ನಡೆದುಕೊಂಡೇ ಬಂದಿವೆ. ಒಂದೇ ಪಕ್ಷದಲ್ಲಿ ಎರಡೆರಡು ಬಣಗಳಾಗಿ ಸಮರದವರೆಗೂ ನಿಂತುಬಿಟ್ಟಿವೆ. ಸ್ಥಳೀಯವಾಗಿ ಪಕ್ಷದಲ್ಲಿರುವ ಮುಖಂಡರ ನಡುವೆ ಹೊಂದಾಣಿಕೆ ಇಲ್ಲ ಎಂಬುದು ನಿನ್ನೆ ನಡೆದ ಘಟನೆಯೇ ಪ್ರಮುಖ ಸಾಕ್ಷಿಯಾಗಿದೆ.



Join Whatsapp