‘ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಷಿಜನ್ ರಾಜ್ಯದ ಬಳಕೆಗೇ ಮೀಸಲಿಡಬೇಕು’ : ಕೇಂದ್ರಕ್ಕೆ ಸಿದ್ದರಾಮಯ್ಯ ಆಗ್ರಹ

Prasthutha|

ಬೆಂಗಳೂರು : ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಮುಖ್ಯಮಂತ್ರಿಗಳು ಹಾಗೂ ರಾಜ್ಯದ ಸಂಸದರು ಸಹ ಕೇಂದ್ರ ಸರ್ಕಾರದ ಮೇಲೆ ಈ ಕುರಿತು ಒತ್ತಡ ಹೇರಬೇಕು ಎಂದು ಅವರು ಹೇಳಿದ್ದಾರೆ.

ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ ಅನುಗುಣವಾಗಿ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

- Advertisement -

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಉಂಟಾಗಿರುವ ಪರಿಸ್ಥಿತಿ, ಸರ್ಕಾರ ಕೈಗೊಂಡಿರುವ ಕ್ರಮಗಳು ಹಾಗೂ ಸೋಂಕಿತರ ಪ್ರಾಣ ರಕ್ಷಣೆಗೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಅವರೊಂದಿಗೆ ಇಂದು ಸಿದ್ದರಾಮಯ್ಯ ಅವರು ಚರ್ಚೆ ನಡೆಸಿದರು.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಕೊರೊನಾ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ. ಆಕ್ಸಿಜನ್ ಲಭ್ಯವಿಲ್ಲದೆ ಚಾಮರಾಜನಗರದಲ್ಲಿ 28 ಮಂದಿ ಮೃತರಾಗಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಅವರು ಕೇವಲ ಮೂರು ಮಂದಿ ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿರುವುದು ಶುದ್ಧ ಸುಳ್ಳು.

ನಿನ್ನೆ ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಚರ್ಚೆ ನಡೆಸಿದಾಗ ಆಕ್ಸಿಜನ್ ಕೊರತೆಯಿಂದ ಮೃತರಾಗಿರುವುದು 28 ಮಂದಿ ಎಂದು ಜಿಲ್ಲಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ, ಆಸ್ಪತ್ರೆಯ ಡೀನ್ ಅವರೇ ಒಪ್ಪಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ನಿತ್ಯ 350 ಆಕ್ಷಿಜನ್ ಸಿಲಿಂಡರ್ ಬೇಕು. ಆದರೆ, ದುರಂತ ಸಂಭವಿಸಿದ ದಿನ ಕೇವಲ 120 ಸಿಲಿಂಡರ್ ಮಾತ್ರ ಪೂರೈಕೆಯಾಗಿತ್ತು. ಮಧ್ಯಾಹ್ನದ ಬಳಿಕ ಬೇಡಿಕೆ ಹೆಚ್ಚಾಗಿದ್ದರಿಂದ ಕೊರತೆ ಸಂಭವಿಸಿತು.

ಸರ್ಕಾರದ ಜವಾಬ್ದಾರಿ :

ಈ ವಿಚಾರದ ಬಗ್ಗೆ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿದ್ದೇನೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಅಗತ್ಯಕ್ಕೆ ಅನುಗುಣವಾಗಿ ಆಕ್ಷಿಜನ್ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ನಿನ್ನೆಯಿಂದಲೇ ಈ ಬಗ್ಗೆ ಗಮನ ಹರಿಸಿರುವುದಾಗಿ ಅಧಿಕಾರಿಗಳು ತಮಗೆ ತಿಳಿಸಿದ್ದಾರೆ. ಮುಂದೆ ಕೊರತೆ ಸಂಭವಿಸಿದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದೂ ಮುಖ್ಯ ಕಾರ್ಯದರ್ಶಿ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರಿಗೆ ಹೇಳಿದ್ದೇನೆ.

ಚಾಮರಾಜನಗರ ದುರಂತದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಹೇಳಿದ್ದೆ. ಇದೀಗ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಈ ದುರಂತಕ್ಕೆ ಸರ್ಕಾರ, ಮಂತ್ರಿಗಳು ಅಥವಾ ಅಧಿಕಾರಿಗಳಲ್ಲಿ ಯಾರು ಕಾರಣ ಎಂಬ ಸತ್ಯ ಹೊರ ಬರಬೇಕು ಎಂಬುದು ನಮ್ಮ ಉದ್ದೇಶ. ಸತ್ಯ ಹೊರಬಂದ ಬಳಿಕ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.

ಆಕ್ಸಿಜನ್ ಪೂರೈಕೆ ವಿಚಾರದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ಹೇಳಿಕೆಗಳು ವಿಭಿನ್ನವಾಗಿದೆ. ಆ ಕುರಿತಾಗಿಯೂ ತನಿಖೆ ನಡೆಯಬೇಕು. ಬೆಂಗಳೂರು, ಕೋಲಾರ, ಬೆಳಗಾವಿ, ಯಾದಗಿರಿ, ಬೀದರ್, ಕಲಬುರ್ಗಿಯಲ್ಲಿಯೂ ಆಕ್ಸಿಜನ್ ಕೊರತೆಯಿಂದ ಕೊರೊನಾ ಸೋಂಕಿತರು ಮೃತರಾಗಿರುವ ವರದಿಗಳು ಬಂದಿವೆ. ಆ ಬಗ್ಗೆಯೂ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತೇನೆ.

ವಿಳಂಬಕ್ಕೆ ಕಾರಣ :

ರಾಜ್ಯದಲ್ಲಿ 812 ಟನ್ ಆಕ್ಸಿಜನ್ ಉತ್ಪಾದನೆ ಆಗುತ್ತದೆ. ಆದರೆ, ಕೇಂದ್ರ ಸರ್ಕಾರ ರಾಜ್ಯದ ಬಳಕೆಗೆ ನಿಗದಿ ಮಾಡಿರುವುದು 675 ಟನ್ ಮಾತ್ರ. 130 ಟನ್ ಒರಿಸ್ಸಾದಿಂದ ನಿಗದಿ ಮಾಡಲಾಗಿದೆ. ಆಕ್ಸಿಜನ್ ಟ್ಯಾಂಕರ್‍ಗಳು ಒರಿಸ್ಸಾದಿಂದ ನಮ್ಮ ರಾಜ್ಯಕ್ಕೆ ಬರಲು 48 ಗಂಟೆಗಳು ಬೇಕು. ವಿಳಂಬಕ್ಕೆ ಇದೂ ಕಾರಣವಾಗಿದೆ.

ಸಂಸದ ತೇಜಸ್ವಿ ಸೂರ್ಯ ಮತ್ತಿತರ ಬಿಜೆಪಿ ಶಾಸಕರು ಬೆಡ್ ಬ್ಲಾಕ್ ಮಾಡುವ ದಂಧೆ ಬಯಲಿಗೆ ಎಳೆದಿದ್ದಾರೆ. ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಇಷ್ಟಕ್ಕೆ ಸೀಮಿತ ಆಗಬಾರದು. ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಇರುವುದು ಇಡೀ ದೇಶಕ್ಕೆ ಗೊತ್ತಿದೆ. ತೇಜಸ್ವಿ ಸೂರ್ಯ ಎಲ್ಲ ಸಂಸದರನ್ನು ಪ್ರಧಾನಿಯವರ ಬಳಿಗೆ ಕರೆದುಕೊಂಡು ಹೋಗಿ ಆಕ್ಸಿಜನ್ ಪೂರೈಕೆಗೆ ಒತ್ತಡ ಹೇರಬೇಕು.

ಜಿಲ್ಲೆಗಳಲ್ಲಿ ಆಕ್ಸಿಜನ್ ತಯಾರಾಗಲಿ :

ತಜ್ಞರ ವರದಿ ಪ್ರಕಾರ ಮೇ ತಿಂಗಳಲ್ಲಿ ಕೊರೊನಾ ಸೋಂಕು ಇನ್ನೂ ಹೆಚ್ಚಾಗುತ್ತದೆ. ಆದ್ದರಿಂದ ಎಲ್ಲ ಜಿಲ್ಲೆಗಳಲ್ಲಿ ಆಕ್ಸಿಜನ್ ತಯಾರಿಸಲು ಅವಕಾಶ ಮಾಡಿಕೊಡಬೇಕು. ಈ ವಿಷಯವನ್ನು ಸರ್ಕಾರ ಆದ್ಯತೆ ಮೇಲೆ ಪರಿಗಣಿಸಬೇಕು.

ಕೇರಳದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಆಕ್ಸಿಜನ್ ಉತ್ಪಾದನೆ ಮಾಡಿಕೊಳ್ಳುತ್ತಾರೆ. ಇದು ನಮ್ಮ ರಾಜ್ಯದಲ್ಲಿ ಯಾಕಾಗಬಾರದು. ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು.

ಈ ಸರ್ಕಾರದಲ್ಲಿ ಪಾರದರ್ಶಕತೆ ಎಂಬುದೇ ಇಲ್ಲ. ಎಲ್ಲ ವಿಷಯಗಳಲ್ಲಿಯೂ ಸುಳ್ಳೇ ರಾರಾಜಿಸುತ್ತಿದೆ. ಜವಾಬ್ದಾರಿಯುತ ಆರೋಗ್ಯ ಮಂತ್ರಿ ಚಾಮರಾಜನಗರದಲ್ಲಿ ಮೂರು ಮಂದಿ ಮಾತ್ರ ಸತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾರೆ.

ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್, ರೆಮಿಡಿಸಿವರ್ ಇಂಜೆಕ್ಷನ್ ಇಲ್ಲ. ಜೊತೆಗೆ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಅವರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಬೇಕು.

ನಮ್ಮ ಶಾಸಕರು, ಕಾರ್ಯಕರ್ತರು ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಬಗ್ಗೆ ನಿತ್ಯ ದೂರು ಹೇಳುತ್ತಾರೆ. ಕೇಂದ್ರಿಂದ ವೆಂಟಿಲೇಟರ್‍ಗಳು ಬಂದಿವೆ. ಅದನ್ನು ಜಿಲ್ಲಾವಾರು ಪೂರೈಕೆ ಮಾಡುವುದಾಗಿ ಅರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದರು.

ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಸಂಸದ ನಾಸೀರ್ ಹುಸೇನ್, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.



Join Whatsapp