ಸಿಎಂ ಹುದ್ದೆಯನ್ನೇ ಮಾರಾಟಕ್ಕಿಟ್ಟಿರುವ ಅಮಿತ್ ಶಾ ಭ್ರಷ್ಟಾಚಾರ ಆರೋಪ ಮಾಡುತ್ತಿರುವುದು ತಮಾಷೆಯಾಗಿದೆ: ಸಿದ್ದರಾಮಯ್ಯ

Prasthutha|

- Advertisement -

ಬೆಂಗಳೂರು: ಮುಖ್ಯಮಂತ್ರಿ ಹುದ್ದೆಯನ್ನೇ 2000 ಕೋಟಿ ರೂಪಾಯಿಗೆ ಮಾರಾಟಕ್ಕೆ ಇಟ್ಟಿರುವ ರಾಜಕೀಯ ವ್ಯಾಪಾರಿ ಕೇಂದ್ರ ಗೃಹಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ತಮಾಷೆಯಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನೇಮಕಾತಿ, ವರ್ಗಾವಣೆ, ಬಡ್ತಿ, ಅನುದಾನ ಹಂಚಿಕೆ, ಕಾಮಗಾರಿ ಅನುಷ್ಠಾನ, ಬಿಲ್ ಪಾವತಿ ಹೀಗೆ ಅಡಿಯಿಂದ ಮುಡಿವರೆಗೆ 40% ಕಮಿಷನ್ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ನಾಯಕರನ್ನು ಪಕ್ಕದಲ್ಲಿಟ್ಟುಕೊಂಡು ಭ್ರಷ್ಟಾಚಾರದ ಬಗೆಗೆ ಮಾತನಾಡುವ ಅಮಿತ್ ಶಾ ಅವರ ಭಂಡತನಕ್ಕೆ ಶಹಭಾಸ್ ಅನ್ನಲೇಬೇಕು ಎಂದಿದ್ದಾರೆ.

- Advertisement -

ರಾಜ್ಯದಲ್ಲಿ ಆಪರೇಷನ್ ಕಮಲದ ಅನೈತಿಕ ಕೂಸು ಬಿಜೆಪಿ ಸರ್ಕಾರ ಹುಟ್ಟಿಕೊಂಡ ದಿನದಿಂದ ಬಡಜನರಿಗೆ ಸಾವಿನ ಭಾಗ್ಯ, ಭ್ರಷ್ಟರಿಗೆ ಸಂಪತ್ತಿನ ಭಾಗ್ಯ ಬಂದು, ವಿಧಾನಸೌಧವೇ ಕಮಿಷನ್ ಅಡ್ಡೆಯಾಗಿ ಬದಲಾಗಿದೆ. ಅಮಿತ್ ಶಾ ಅವರೇ ಈ 40% ನಲ್ಲಿ ನಿಮ್ಮ ಪಾಲೆಷ್ಟು? ಬೆಳಗಾವಿಯ ಸಂತೋಷ್ ಪಾಟೀಲ್ ಅವರಿಂದ ಹಿಡಿದು ದೇವರಾಯನದುರ್ಗದ ಟಿ.ಎನ್ ಪ್ರಸಾದ್ ವರೆಗೆ ರಾಜ್ಯದ ಬಿಜೆಪಿ ಸರ್ಕಾರದ 40% ಕಮಿಷನ್ ಕಿರುಕುಳಕ್ಕೆ ಬಲಿಯಾದ ಗುತ್ತಿಗೆದಾರರ ಸರಣಿ ಆತ್ಮಹತ್ಯೆಗಳು ನಿಂತಿಲ್ಲ. ಈ ಸಾವುಗಳಿಗೆ ನ್ಯಾಯ ಕೊಡ್ತೀರಾ ಮಿಸ್ಟರ್ ಅಮಿತ್ ಶಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕರ್ನಾಟಕದ ಪಾಲಿನ ಜಿಎಸ್ಟಿ ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಂದಿಲ್ಲ, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಿಲ್ಲ, ಅತಿವೃಷ್ಟಿ, ಅನಾವೃಷ್ಟಿ, ಬೆಳೆಹಾನಿ ಪರಿಹಾರ ರೈತರಿಗೆ ಸಿಕ್ಕಿಲ್ಲ. ಅಮಿತ್ ಶಾ ಅವರೇ ಬಿಜೆಪಿ ಸರ್ಕಾರದ 40% ಕಮಿಷನ್ನಲ್ಲಿ ನಿಮ್ಮ ಪಾಲು ತಪ್ಪದೆ ಸಂದಾಯ ಆಗುತ್ತಿದೆಯೇ? ಕೊರೊನಾ ಕಾಲದಲ್ಲಿ ನಿಮ್ಮ ಬಿಜೆಪಿ ಸರ್ಕಾರದ ಸಚಿವರು ಕಮಿಷನ್ ಮುಕ್ಕಿ ತೇಗಿದರು. ನಿರಪರಾಧಿ ಜನ ಆಮ್ಲಜನಕ, ಬೆಡ್, ವೆಂಟಿಲೇಟರ್ ಸಿಗದೆ ಹಾದಿಬೀದಿಯಲ್ಲಿ ಪ್ರಾಣ ಬಿಟ್ಟರು. ನೀವು ತಟ್ಟೆ ಬಾರಿಸಲು ಹೇಳಿ ಜನರನ್ನು ಮಂಗ ಮಾಡಿದಿರಿ. ಇದನ್ನು ರಾಜ್ಯದ ಜನ ಮರೆತಿಲ್ಲ ಎಂದು ಅವರು ಕಿಡಿಕಾರಿದ್ದಾರೆ.

Join Whatsapp