ಇಂದು, ನಾಳೆ ಡಿಸಿ, ಸಿಇಒಗಳ ಜತೆ ಸಿದ್ದರಾಮಯ್ಯ ಸಭೆ

Prasthutha|

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಜಾರಿಗೆ ಸಿಎಂ ಸೂಚನೆ

- Advertisement -

ಬೆಂಗಳೂರು: ಸರ್ಕಾರ ಬಂದು ನೂರು ದಿನಗಳನ್ನು ಪೂರೈಸಿದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಕರೆದಿದ್ದಾರೆ.

ಮೂರು ತಿಂಗಳಿಂದ ಎರಡು ಬಾರಿ ವಿಡಿಯೋ ಸಂವಾದ ಮಾತ್ರ ನಡೆಸಿದ್ದ ಸಿಎಂ, ಪ್ರಮುಖವಾಗಿ 5 ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಬರಗಾಲದ ಕುರಿತು ಚರ್ಚಿಸಿದ್ದರು.

- Advertisement -

ಇದೀಗ ಖುದ್ದು ಡಿಸಿ, ಸಿಇಒಗಳ ಹಾಜರಿಗೆ ಸೂಚಿಸಿದ್ದು, ಮಂಗಳವಾರ ಮತ್ತು ಬುಧವಾರ ಕ್ರಮವಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಸರಣಿ ಸಭೆ ನಡೆಯಲಿದೆ.

ಜತೆಗೆ ಸಚಿವರಿಗೂ ಕಡ್ಡಾಯ ಹಾಜರಿಗೆ ಸೂಚಿಸಲಾಗಿದೆ. ಮೊದಲ ದಿನ ಬೆಳಗ್ಗೆ 10.30 ರಿಂದ ಸಂಜೆ 5.30 ರವರೆಗೆ ಜಿಲ್ಲಾಧಿಕಾರಿಗಳ ಸಭೆ ನಡೆದರೆ, ಎರಡನೇ ದಿನ ಸಹ ಇಡೀ ದಿನ ಸಿಇಒಗಳ ಸಭೆ ನಡೆಸಲಿದ್ದಾರೆ.

ಗ್ಯಾರಂಟಿಗಳ ಪರಿಣಾಮಕಾರಿ ಅನುಷ್ಠಾನ

ಈಗಾಗಲೇ 5 ಗ್ಯಾರಂಟಿ ಯೋಜನೆಗಳ ಪೈಕಿ 4 ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ರಾಜ್ಯದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆ ಆರಾಮದಾಯಕವಾಗಿ ಸಾಗುತ್ತಿದ್ದು, ಅನ್ನಭಾಗ್ಯ, ಗೃಹಜ್ಯೋತಿ ಮತ್ತು ಗೃಹಲಕ್ಷ್ಮೀ ಯೋಜನೆಗಳ ಫ‌ಲಾನುಭವಿಗಳಿಗೆ ನೇರ ನಗದು ಜಮೆ ಆಗುತ್ತಿರುವುದರಿಂದ ದೊಡ್ಡ ಮಟ್ಟದ ಸಮಸ್ಯೆಗಳಿಲ್ಲ. ಆದರೂ ಅರ್ಹ ಫ‌ಲಾನುಭವಿಗಳ ಗುರುತಿಸುವಿಕೆ, ಬ್ಯಾಂಕ್‌ ಖಾತೆ ಮತ್ತು ಆಧಾರ ವಿಲೀನದಂತಹ ಪ್ರಕ್ರಿಯೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಈ ಹಿಂದೆಯೂ ಸೂಚಿಸಿದ್ದರು. ಈ ಬಗ್ಗೆ ಮತ್ತೊಮ್ಮೆ ಸೂಚನೆ ಕೊಡುವ ಸಾಧ್ಯತೆಗಳಿವೆ. ಇದೆಲ್ಲದರ ಜತೆಗೆ ಡಿಸೆಂಬರ್‌ ಅಥವಾ ಜನವರಿ ತಿಂಗಳಲ್ಲಿ ಚಾಲನೆ ನೀಡಲು ಉದ್ದೇಶಿಸಿರುವ ಯುವನಿಧಿ ಯೋಜನೆ ಅನುಷ್ಠಾನದ ವೇಳೆ ತೊಂದರೆ ಆಗದಂತೆ ಈಗಿನಿಂದಲೇ ಸೂಕ್ತ ಕ್ರಮ ವಹಿಸುವಂತೆಯೂ ಸಲಹೆ ನೀಡಬಹುದು.

ಬರ ಪರಿಸ್ಥಿತಿಯ ನಿರ್ವಹಣೆ ಬಗ್ಗೆ ಚರ್ಚೆ

 ತೀವ್ರ ಮಳೆ ಕೊರತೆ ಎದುರಿಸುತ್ತಿರುವ 62 ತಾಲೂಕುಗಳೂ ಸೇರಿ ಬೆಳೆ ನಷ್ಟ ಮತ್ತಿತರ ಬರಗಾಲದ ಸಂಕಷ್ಟ ಅನುಭವಿಸುತ್ತಿರುವ 130ಕ್ಕೂ ಹೆಚ್ಚು ತಾಲೂಕುಗಳಲ್ಲಿನ ಬರ ನಿರ್ವಹಣೆ ಕುರಿತೂ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಬಹುಮುಖ್ಯವಾಗಿ ಮಳೆ ಹಾಗೂ ತೇವಾಂಶದ ಕೊರತೆಯಿಂದ ಎಲ್ಲೆಲ್ಲಿ ಬೆಳೆ ನಷ್ಟವಾಗಿದೆ? ಆಹಾರ ಧಾನ್ಯ ಕೊರತೆ ಉಂಟಾಗಬಹುದೇ? ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎಲ್ಲೆಲ್ಲಿದೆ? ಮೇವಿನ ಕೊರತೆ ಇದೆಯೇ? ಕೇಂದ್ರ ಸರ್ಕಾರದಿಂದ ಎಷ್ಟು ಪರಿಹಾರ ಸಿಗಬಹುದು? ರಾಜ್ಯ ಸರ್ಕಾರದ ಮುಂದಿರುವ ಪರಿಹಾರ ಮಾರ್ಗಗಳೇನು ಎಂಬಿತ್ಯಾದಿ ಅಂಶಗಳ ಬಗ್ಗೆ ಸುದೀರ್ಘ‌ ಸಮಾಲೋಚನೆ ನಡೆಯುವ ಸಂಭವ ಇದೆ.

ಇದಿಷ್ಟೆ ಅಲ್ಲದೆ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಹಿನ್ನಡೆ ಆಗಿದ್ದು, ಕಡತ ವಿಲೇವಾರಿಗಳೂ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪಗಳಿವೆ. ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಅನುಷ್ಠಾನ ಆಗಬೇಕಿರುವ ಇತರೆ ಯೋಜನೆಗಳ ಕುರಿತು ಡಿಸಿ, ಸಿಇಒಗಳಿಗೆ ಸ್ಪಷ್ಟ ಸಲಹೆ-ಸೂಚನೆಗಳನ್ನು ಸಿಎಂ ನೀಡಲಿದ್ದಾರೆ.

ಬುಧವಾರ ಸಂಪುಟ ಉಪಸಮಿತಿ ಸಭೆ

ಮಂಗಳವಾರ ಹಾಗೂ ಬುಧವಾರ ಡಿಸಿ, ಸಿಇಒಗಳ ಸಭೆ ಒಂದೆಡೆಯಾದರೆ, ಇನ್ನೊಂದೆಡೆ ಬುಧವಾರ ಬೆಳಗ್ಗೆ 11.30ಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪಸಮಿತಿ ಸಭೆ ನಡೆಯಲಿದ್ದು, ಕೃಷಿ ಸಚಿವ ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಸೇರಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಬೆಳೆ ನಷ್ಟದ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗೆ ಈ ಹಿಂದೆ ಸೂಚಿಸಲಾಗಿತ್ತು. ಈ ವರದಿ ಆಧರಿಸಿ ಬರಗಾಲ ಬಾಧಿತ ತಾಲೂಕುಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಗಳಿವೆ. ಗುರುವಾರದಂದೇ ಸಂಪುಟ ಸಭೆ ನಡೆಯಲಿದ್ದು, ಬರಪೀಡಿತ ತಾಲೂಕುಗಳ ಪಟ್ಟಿ ಅಂತಿಮಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಣಯ ಕೈಗೊಳ್ಳಬಹುದು.



Join Whatsapp