ಬಿಜೆಪಿ ಕೋರ್ ಕಮಿಟಿ ಸಭೆಗೆ ‘ಭಿನ್ನ’ ಶಾಸಕರು ಗೈರು

Prasthutha|

ಹುಬ್ಬಳ್ಳಿ: ಬಿಜೆಪಿ ನಾಯಕರು ನಿನ್ನೆ(ಸೆಪ್ಟೆಂಬರ್ 11) ಕರೆದ ಮಹತ್ವದ ಕೋರ್ ಕಮಿಟಿ ಸಭೆಗೆ ಭಿನ್ನ ಶಾಸಕರು ಗೈರಾಗಿದ್ದಾರೆ.  ಭಿನ್ನಮತ ಶಮನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಖಾಸಗಿ ಹೋಟೆಲ್​ನಲ್ಲಿ ಕೋರ್ ಕಮಿಟಿ ಸಭೆ ಹಮ್ಮಿಕೊಂಡಿದ್ದರು. ಆದರೆ, ಸಭೆಗೆ ಅಹ್ವಾನ ಇದ್ರೂ ಪ್ರದೀಪ್ ಶೆಟ್ಟರ್, ಮುನೇನಕೊಪ್ಪ, ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಗೈರಾಗುವ ಮೂಲಕ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

- Advertisement -

ಬಿಜೆಪಿಯ ಹಿರಿಯ ನಾಯಕರೇ ಸ್ವಪಕ್ಷದ ವಿರುದ್ಧ ಬುಸುಗುಡುತ್ತಿದ್ದಾರೆ. ಭಿನ್ನಮತ ಶಮನಕ್ಕೆ ಎಂದು ಕರೆದ ಸಭೆಯಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಒಂದು ಕಾಲದಲ್ಲಿ ಹುಬ್ಬಳ್ಳಿ-ಧಾರವಾಡ ಬಿಜೆಪಿಯ ಭದ್ರಕೋಟೆಯಾಗಿತ್ತು. ಇಲ್ಲಿ ಕಾಂಗ್ರೆಸ್ ಇದ್ದು ಇಲ್ಲದಂತಾಗಿತ್ತು. ಆದ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಹುಬ್ಬಳ್ಳಿ-ಧಾರವಾಡ ಬಿಜೆಪಿಯ ಕೋಟೆ ಒಡೆದ ಮನೆಯಂತಾಗಿದೆ. ಲೋಕಸಭೆ ಚುನಾವಣೆಗೆ ಶೆಟ್ಟರ್ ದಾಳ ಉರುಳಿಸಿದ್ದು, ಬಿಜೆಪಿಯಲ್ಲಿ ಅಲ್ಲೋಲ-ಕಲ್ಲೋಲ ಶುರುವಾಗಿದೆ.

15 ದಿನದ ಹಿಂದಷ್ಟೇ ಶೆಟ್ಟರ್ ಆಪ್ತ ಹಾಗೂ ಮಾಜಿ ಸಚಿವ ಮುನೇನಕೊಪ್ಪ ಸ್ವಪಕ್ಷ ಬಿಜೆಪಿ ವಿರುದ್ಧ ಕೆಂಡಕಾರಿದ್ದರು. ಅಷ್ಟೇ ಅಲ್ಲ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಬಿಜೆಪಿ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿದ್ದರು. ಬಿಜೆಪಿಯಲ್ಲಿ ಹೇಳೋರು ಇಲ್ಲ ಕೇಳೋರು ಇಲ್ಲ ಎಂದು ಗುಡುಗಿದ್ದರು. ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದ ಜಗದೀಶ್ ಶೆಟ್ಟರ್, ಬಿಜೆಪಿ ತೊರೆಯುವ ಲಿಂಗಾಯತ ನಾಯಕರ ಪಟ್ಟಿಯನ್ನೇ ತೆರೆದಿಟ್ಟಿದ್ದರು. ಇದರ ಬೆನ್ನಲ್ಲೇ ಅಲರ್ಟ್ ಆದ ಬಿಜೆಪಿ ನಾಯಕರು ನಿನ್ನೆ(ಸೆಪ್ಟೆಂಬರ್ 11) ಮಹತ್ವದ ಕೋರ್ ಕಮಿಟಿ ಸಭೆ ಕರೆದಿತ್ತು. ಆದರೆ, ಸಭೆಗೆ ಅಹ್ವಾನ ಇದ್ರೂ ಭಿನ್ನ ಶಾಸಕರು ಗೈರಾಗಿದ್ದಾರೆ.

Join Whatsapp