ಕೋವಿಡ್ ನಿರ್ವಹಣೆ ಕುರಿತು ಮಾಹಿತಿ ಪಡೆಯಲು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಭೆಗೆ ರಾಜ್ಯ ಸರ್ಕಾರ ಅನುಮತಿ ನಿರಾಕರಣೆ | ಸಿದ್ದರಾಮಯ್ಯ ಆಕ್ರೋಶ

Prasthutha|

ಬೆಂಗಳೂರು: ಕೋವಿಡ್ ನಿರ್ವಹಣೆ ಕುರಿತ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ವಿಪಕ್ಷ ನಾಯಕರ ಸಭೆಗೆ ಅನುಮತಿ ನಿರಾಕರಿಸಿದ ಸರಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

- Advertisement -

ಈ ಕುರಿತು ಸರಕಾರಕ್ಕೆ ಪತ್ರ ಬರೆದಿರುವ ಅವರು, ಈ ಹಿಂದೆ ತಂತ್ರಜ್ಞಾನದ ಮೂಲಕ ಸಭೆ ನಡೆಸುವ ಅವಕಾಶಗಳಿರಲಿಲ್ಲ. ಅಂತಹ ಸಮಯದಲ್ಲಿ ಸಭೆ ನಡೆಸಬೇಕಾಗುತ್ತಿತ್ತು. ಆದರೆ ಇಂದು ತಂತ್ರಜ್ಞಾನ ಮುಂದುವರೆದಿದ್ದು ವೀಡಿಯೋ ಕಾನ್ಫರೆನ್ಸ್ ಮೂಲಕವೂ ಸಭೆ ನಡೆಸಬಹುದಾಗಿದೆ. ಆದರೆ ಸರಕಾರ ಯಾಕಾಗಿ ಅನುಮತಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

“ಕೋವಿಡ್ ಸಂಬಂಧಿತ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆಯವುದಷ್ಟೇ ನನ್ನ ಉದ್ದೇಶವಾಗಿತ್ತು. ಅದರ ಬದಲು ಅಧಿಕಾರಿಗಳಿಗೆ ಯಾವುದೇ ನಿರ್ದೇಶನ ನೀಡುವ ಉದ್ದೇಶ ಹೊಂದಿರಲಿಲ್ಲ. ಆ ರೀತಿಯ ಅವಕಾಶವೂ ನನಗಿಲ್ಲ ಅನ್ನೋ ಕನಿಷ್ಟ ಸಾಂವಿಧಾನಿಕ ಅರಿವು ನನಗಿದೆ” ಎಂದು ಅವರು ತಿಳಿಸಿದ್ದಾರೆ.

- Advertisement -

ಮೇ 17 ರಂದು ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ, ಇದೇ ತಿಂಗಳ 21 ರಿಂದ 25ರ ವರೆಗೆ ಪ್ರತಿ ಜಿಲ್ಲೆಯ ಅಧಿಕಾರಿಗಳ ಜೊತೆ ಒಂದು ಗಂಟೆ ಚರ್ಚಿಸಲು ಅವಕಾಶ ನೀಡಬೇಕಾಗಿ ಕೇಳಿಕೊಂಡಿದ್ದರು. ಆದರೆ ವಿಪಕ್ಷ ನಾಯಕರು ಸರಕಾರದ ಭಾಗವಾಗಿಲ್ಲದೇ ಇರುವುದರಿಂದ ಸಚಿವರಿಗೆ ಇರುವ ಆಡಳಿತಾತ್ಮಕ ಅಧಿಕಾರ ನಿಮಗಿಲ್ಲ ಎಂದು ಅನುಮತಿ ನಿರಾಕರಿಸಲಾಗಿತ್ತು. ಅಲ್ಲದೇ, ಈ ಹಿಂದೆ 2016ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಹೊರಡಿಸಲಾಗಿದ್ದ ಸುತ್ತೋಲೆಯನ್ನೂ ಉಲ್ಲೇಖಿಸಲಾಗಿತ್ತು.

ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಅಧಿಕಾರಿಗಳ ಜೊತೆಗಿನ ಸಭೆ ನಡೆಸಲು ಅವಕಾಶ ನಿರಾಕರಿಸಿದ್ದನ್ನ ಖಂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, “ಈ ಹಿಂದೆ ಯಡಿಯೂರಪ್ಪನವರು ವಿಪಕ್ಷ ನಾಯಕರಾಗಿದ್ದಾಗ ಸಭೆ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ ಈಗ್ಯಾಕೆ ನೀಡಲಾಗುತ್ತಿಲ್ಲ?” ಎಂದು ಪ್ರಶ್ನಿಸಿದ್ದಾರೆ.

Join Whatsapp