ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ರಾತ್ರಿ ಕಳೆಯುವ ಕಾರ್ಮಿಕರ ನೆರವಿಗೆ ಧಾವಿಸುವಂತೆ ಸಿಎಂ ಸೂಚನೆ

Prasthutha|

ಬೆಂಗಳೂರು: ಒಡಿಶಾದಲ್ಲಿ ನಡೆದ ರೈಲು ದುರಂತ ಹಿನ್ನೆಲೆಯಲ್ಲಿ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ. ಹೀಗಾಗಿ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

- Advertisement -

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಒಡಿಶಾದಲ್ಲಿ ರೈಲು ಅಪಘಾತ ಸಂಭವಿಸಿರುವ ಕಾರಣ ಆ ಮಾರ್ಗದಲ್ಲಿ ಸಂಚರಿಸುವ ಹತ್ತಾರು ರೈಲುಗಳ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳು, ಕೋಲ್ಕತ್ತಾ ಮುಂತಾದ ಕಡೆಗಳಿಗೆ ತೆರಳಬೇಕಿರುವ ಕಾರ್ಮಿಕರು ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲೇ ದಿನ ಕಳೆಯುವಂತಾಗಿದೆ. ಹೀಗಾಗಿ ಅವರೆಲ್ಲರಿಗೂ ಊಟ, ತಿಂಡಿ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಿಗೆ ತೆರಳಬೇಕಾಗಿದ್ದ ರೈಲುಗಳ ಪ್ರಯಾಣ ರದ್ದಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ & ಯಶವಂತಪುರ ಜಂಕ್ಷನ್ ಗಳಲ್ಲಿಯೇ ಪ್ರಯಾಣಿಕರು ಉಳಿದುಕೊಂಡಿದ್ದಾರೆ.

- Advertisement -

ಮಾನ್ಯ ಮುಖ್ಯಮಂತ್ರಿಗಳು ಮತ್ತು ಮಾನ್ಯ ಉಪ ಮುಖ್ಯಮಂತ್ರಿಗಳ ನಿರ್ದೇಶನದಂತೆ ಬಿಬಿಎಂಪಿ ವತಿಯಿಂದ ಈ ಪ್ರಯಾಣಿಕರಿಗೆ ತಿಂಡಿ, ಊಟ, ವಸತಿ ಸೇರಿದಂತೆ ಚಿಕ್ಕ ಮಕ್ಕಳಿಗೆ ಬಿಸಿಹಾಲು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಮತ್ತು ಈ ಪ್ರಯಾಣಿಕರಿಗೆ ಅಗತ್ಯವಾದ ತುರ್ತು ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

Join Whatsapp