► ಶ್ರೀ ಕೃಷ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಿಂದ ಶಿಕ್ಷಕರ ದಿನಾಚರಣೆ : ಶಿಕ್ಷಣ ತಜ್ಞರಿಗೆ ಸನ್ಮಾನ
ಬೆಂಗಳೂರು: ವಿಶ್ವ ವಿದ್ಯಾಲಯಗಳ ಹಂತದಲ್ಲಿ ಮಾನ್ಯತೆ ನೀಡುವ ವ್ಯವಸ್ಥೆ ರದ್ದಾಗಬೇಕು ಎಂದು ಶಿಕ್ಷಣ ತಜ್ಞ ಮತ್ತು ವಿಧಾನಪರಿಷತ್ತಿನ ಮಾಜಿ ಸದಸ್ಯ ಡಾ.ಎಂ.ಆರ್.ದೊರೆಸ್ವಾಮಿ ಹೇಳಿದ್ದಾರೆ.
ಶ್ರೀ ಕೃಷ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ನಿಂದ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುಲಪತಿ, ಉಪಕುಲಪತಿ ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಮಾನ್ಯತೆ ನೀಡುವ ವ್ಯವಸ್ಥೆಯನ್ನು ಕೂಡಲೇ ತೆಗೆದುಹಾಕಬೇಕು, ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಸಹ ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಳ್ಳಬೇಕು. ಸ್ವಾತಂತ್ರ್ಯ ನೀಡಿದಾಗ ಮಾತ್ರ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಣ ವ್ಯವಸ್ಥೆ ಅಭಿವೃದ್ಧಿಹೊಂದಲು ಸಾಧ್ಯ ಎಂದು ಪ್ರತಿಪಾದಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಂದಿರುವ ಹೊಸ ರಾಷ್ಟೀಯ ಶಿಕ್ಷಣ ನೀತಿ ಅತ್ಯಂತ ಮಹತ್ವ ಪಡೆದುಕೊಂಡಿದ್ದು, ಸ್ವಾತಂತ್ರ್ಯೋತ್ತರದಲ್ಲಿನ ಶಿಕ್ಷಣದ ಕೊರತೆಯನ್ನು ನೀಗಿಸಲಿದೆ. ಇಂತಹ ಹೊಸ ಆಲೋಚನೆಗಳ ಶಿಕ್ಷಣ ನೀತಿ ಇಂದಿನ ಕಾಲಘಟ್ಟಕ್ಕೆ ಅತ್ಯಂತ ಸೂಕ್ತವಾಗಿದೆ. ಈ ನೀತಿ ಅತ್ಯಂತ ಆಳವಾದ ಚಿಂತನೆ ಮತ್ತು ತಳಹದಿ ಹೊಂದಿದೆ ಎಂದು ಹೇಳಿದರು.
ಕೋವಿಡ್ ನಂತರದ ಯುಗದಲ್ಲಿ ಇದೀಗ ಆನ್ ಲೈನ್ ಬಿಟ್ಟು ಆಫ್ ಲೈನ್ ಶಿಕ್ಷಣಕ್ಕೆ ಒತ್ತು ನೀಡುವ ಅಗತ್ಯವಿದೆ. ಆನ್ ಲೈನ್ ಶಿಕ್ಷಣದಿಂದ ಗುಣಮಟ್ಟ ಕುಸಿತವಾಗಲಿದ್ದು, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಆಸಕ್ತಿ ಕಡಿಮೆಯಾಗುತ್ತದೆ. ತರಗತಿಗಳಲ್ಲಿನ ಕಲಿಕೆ ಅತ್ಯಂತ ಮಹತ್ವದ್ದಾಗಿದೆ. ಎಂದು ಹೇಳಿದರು.
ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ .ವಿದ್ಯಾರ್ಥಿಗಳಿಗೆ ಸರಿಯಾದ ಗುರಿ ಮತ್ತು ಉತ್ತಮ ಮಾರ್ಗ ತೋರುವ ಗುರು ಲಭಿಸಿದರೆ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಇಡಿ ವಿಶ್ವದಲ್ಲಿ ಅತಿ ಹೆಚ್ಚು ಯುವ ಜನಾಂಗ ಇರುವ ದೇಶ ನಮ್ಮ ಭಾರತ, ಯುವ ಜನಾಂಗವನ್ನು ಸನ್ಮಾರ್ಗದಲ್ಲಿ ಬಳಸಿಕೊಂಡರೆ ಭಾರತ ವಿಶ್ವದಲ್ಲಿ ಬಲಿಷ್ಠ ರಾಷ್ಟ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗಡಿನಾಡು ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ್ (ನಿವೃತ್ತ ಐ.ಎ.ಎಸ್), ಉಪಕುಲಪತಿ ವೈ.ಎಸ್.ಸಿದ್ದೇಗೌಡರು ಮತ್ತು ಮಾಜಿ ರಾಷ್ಟಪತಿ ಡಾ.ಸರ್ವಪಲ್ಲಿ ರಾಧಕೃಷ್ಣನ್ ರವರ ಮೊಮ್ಮಗ ಡಾ.ಸುಬ್ರಮಣ್ಯ ಶರ್ಮ, ಮಾಜಿ ಉಪಕುಲಪತಿ ಡಾ.ಎಸ್.ಸಚ್ಚಿದಾನಂದ, ಶ್ರೀ ಕೃಷ್ಣ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಂಸ್ಥಾಪಕರು ಅಧ್ಯಕ್ಷ ರುಕ್ಮಾಂಗದ ಮತ್ತಿತತರರು ಪಾಲ್ಗೊಂಡಿದ್ದರು.