ಮುಸ್ಲಿಮರ ಮತದಾನದ ಹಕ್ಕು ಕಿತ್ತುಕೊಳ್ಳಬೇಕು ಎಂದ ಬಿಜೆಪಿ ಶಾಸಕನಿಗೆ ಶೋಕಾಸ್ ನೋಟಿಸ್

Prasthutha|

ಪಾಟ್ನ: ಬಿಹಾರದಲ್ಲಿ ಬಿಜೆಪಿಯ ಶಾಸಕರಾಗಿರುವ ಹರಿಭೂಷಣ್ ಠಾಕೂರ್ ಅವರು ಮುಸ್ಲಿಮರಿಗೆ ಮತದಾನದ ಹಕ್ಕು ಇರಬಾರದು. ಅವರು ಭಾರತದಲ್ಲಿ ಎರಡನೆಯ ದರ್ಜೆಯ ಪ್ರಜೆಗಳಾಗಿ ಇರಬೇಕು ಎಂದು ಹೇಳಿದ್ದು ದೊಡ್ಡ ವಿವಾದವಾಗಿದೆ.

- Advertisement -

ಈ ಸಂಬಂಧ ರಾಜ್ಯ ಬಿಜೆಪಿ ಘಟಕವು ಕಾರಣ ಕೇಳಿ ಹರಿಭೂಷಣರಿಗೆ ನೋಟಿಸ್ ನೀಡಿದೆ. ಈ ಹೇಳಿಕೆಯು ಅಸಂಬದ್ಧ ಮತ್ತು ಪ್ರಚೋದಕ ಎಂದು ಬಿಹಾರದಲ್ಲಿ ಬಿಜೆಪಿಯ ಮೈತ್ರಿ ಕೂಟದಲ್ಲಿರುವ ಜೆಡಿಯು ತೀವ್ರವಾಗಿ ಖಂಡಿಸಿದೆ.

“ದೇಶ ವಿಭಜನೆಯ ವೇಳೆ 1947ರಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ದೇಶ ನೀಡಲಾಗಿದೆ, ಅವರು ಪಾಕಿಸ್ತಾನಕ್ಕೆ ಹೋಗಬೇಕು. ಅವರು ಭಾರತದಲ್ಲಿ ಇರಲು ಬಯಸಿದರೆ ಎರಡನೆಯ ದರ್ಜೆಯ ನಾಗರಿಕರಾಗಿ ಬದುಕಬೇಕು. ಮುಸ್ಲಿಮರಿಗಿರುವ ಮತದಾನದ ಹಕ್ಕನ್ನು ಕಿತ್ತುಕೊಳ್ಳಬೇಕು ಎಂದು ನಾನು ಸರಕಾರವನ್ನು ಒತ್ತಾಯಿಸುತ್ತೇನೆ” ಎಂದು ಬಿಹಾರದ ಮಧುಬನಿ ಜಿಲ್ಲೆಯ ಬಿಸ್ಫಿ ಕ್ಷೇತ್ರದ ಈ ಬಿಜೆಪಿ ಶಾಸಕ ಹೇಳಿದ್ದಾರೆ. ಈ ಮುಸ್ಲಿಮರು ಭಾರತವನ್ನು ಮುಸ್ಲಿಮ್ ದೇಶ ಮಾಡಲು ನೋಡುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

- Advertisement -

ಇವರು ಹಿಂದೆಯೂ ವಿವಾದಾತ್ಮಕ ಹೇಳಿಕೆ ನೀಡುವುದರಲ್ಲಿ ಕುಖ್ಯಾತಿ ಗಳಿಸಿದ್ದರು.

ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರು ನಾವು ಹರಿಭೂಷಣರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

“ಈ ಬಿಜೆಪಿ ಶಾಸಕನಿಗೆ ಭಾರತೀಯ ಪೌರತ್ವದ ಬಗ್ಗೆ ಸ್ವಲ್ಪವೂ ಅರಿವು ಇದ್ದಂತಿಲ್ಲ. ಭಾರತದಲ್ಲಿ ವಾಸಿಸುವವರ ಪೌರತ್ವದ ಬಗ್ಗೆ ತೀರ್ಮಾನಿಸಲು ಈತ ಯಾರು? ಇಂಥ ಹೇಳಿಕೆಯಿಂದ ಆತ ಯಾವುದೇ ರಾಜಕೀಯ ಲಾಭ ಪಡೆಯುವುದು ಸಾಧ್ಯವಿಲ್ಲ. ಬರೇ ಮಾಧ್ಯಮ ಪ್ರಚಾರ ಗಿಟ್ಟಿಸಬಹುದು” ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ಹೇಳಿದರು.

ಇತ್ತೀಚೆಗೆ ಮತ್ತೊಬ್ಬ ಶಾಸಕ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಗೋವಿಂದ್ ಗಂಜ್ ಕ್ಷೇತ್ರದ ಸುನಿಲ್ ಮಣಿ ತಿವಾರಿ ಹೇಳಿಕೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. “ಈ ದೇಶದಲ್ಲಿ ಯಾರಾದರೂ ಬದುಕಬೇಕೆಂದರೆ ರಾಧೇ ರಾಧೆ, ಜೈ ಶ್ರೀರಾಮ್, ವಂದೇ ಮಾತರಂ ಎಂದಿತ್ಯಾದಿಯಾಗಿ ಹೇಳಬೇಕು. ಇದು ಮೋದಿ ಮತ್ತು ಯೋಗಿ ಸರಕಾರ ಎನ್ನುವುದು ಅವರಿಗೆ ನೆನಪಿರಬೇಕು.” ಎಂದು ಆ ಶಾಸಕ ಮಾತನಾಡಿದ್ದರು.

Join Whatsapp