ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿ ಮೇ 31ರ ಸಂಜೆ ನಿವೃತ್ತಿಯಾದ ಅಲಪನ್ ಬಂಡೋಪಾಧ್ಯಾಯ ಅವರನ್ನು ಬೆಂಬಿಡದ ಕೇಂದ್ರ ಸರ್ಕಾರ, ನಿವೃತ್ತಿಯ ಬೆನ್ನಲ್ಲೇ ಶೋಕಾಸ್ ನೋಟಿಸ್ ಜಾರಿ ಮಾಡಿದೆ.ದೆಹಲಿಯ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ (ಡಿಒಪಿಟಿ) ಸೋಮವಾರ ಬೆಳಿಗ್ಗೆ ವರದಿ ಸಲ್ಲಿಸಲು ವಿಫಲವಾದ ಕಾರಣ ಕೇಂದ್ರ ಸರ್ಕಾರವು ಸೋಮವಾರ ಸಂಜೆ ಬಂಗಾಳದ ನಿವೃತ್ತ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡ್ಯೋಪಾಧ್ಯಾಯರಿಗೆ ಶೋ-ಕಾಸ್ ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರ ಬಂಡೋಪಾಧ್ಯಾಯ ವಿರುದ್ಧ ದೋಷಾರೋಪ ಮತ್ತು ಶಿಸ್ತು ಕ್ರಮ ತೆಗೆದುಕೊಳ್ಳಬಹುದು ಎಂದು ತಿಳಿದುಬಂದಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ನೋಟೀಸ್ ನೀಡಲಾಗಿದ್ದು, ಮೂರು ದಿನಗಳಲ್ಲಿ ಪ್ರತಿಕ್ರಿಯಿಸಲು ಬಂದೋಪಾಧ್ಯಾಯರಿಗೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರವು ಶುಕ್ರವಾರ ಬಂಡೋಪಾಧ್ಯಾಯರನ್ನು ಕೇಂದ್ರಕ್ಕೆ ಹಿಂದಕ್ಕೆ ಕಳುಹಿಸುವಂತೆ ಆದೇಶಿಸಿದ ನಂತರ, ಬಂಡೋಪಾಧ್ಯಾಯ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿ ನಿನ್ನೆ ಸಂಜೆ ನಿವೃತ್ತರಾಗಿದ್ದರು. ನಿವೃತ್ತಿಯ ಬೆನ್ನಲ್ಲೇ ಮಮತಾ ಬ್ಯಾನರ್ಜಿ, ಅವರನ್ನು ತಮ್ಮ ಮುಖ್ಯ ಸಲಹೆಗಾರರಾಗಿ ನೇಮಕಮಾಡಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದಿರುವ ಕೇಂದ್ರ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಂಡೋಪಾಧ್ಯಾಯ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದೆ.