ಮಂಡ್ಯ: ಕಾಡುಹಂದಿಗಳ ಬೇಟೆಗೆ ಬಂದಿದ್ದ ಬೇಟೆಗಾರರು ಯುವಕನಿಗೆ ಗುಂಡು ಹೊಡೆದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರ ಗ್ರಾಮದ ಹೊರವಲಯದಲ್ಲಿ ಈ ಅನಾಹುತ ಸಂಭವಿಸಿದೆ. ಗುಂಡೇಟು ತಗುಲಿದ್ದು ಮಾದೇಶ್ (25) ಎಂಬ ಯುವಕನಿಗಾಗಿದೆ.
ಕಾಡುಹಂದಿಗಳ ಬೇಟೆಗಾಗಿ ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿದ್ದು. ನಾಡಬಂದೂಕು ಬಳಸಿ ಮಾದೇಶನ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ತಂಡ ಶೋಧ ನಡೆಸುತ್ತಿತ್ತು. ಈ ಸಮಯದಲ್ಲಿ ಅದೇ ಗದ್ದೆಯ ಬದುವಿನಲ್ಲಿ ಮಾದೇಶ ಹುಲ್ಲು ಕೊಯ್ಯುತ್ತಿದ್ದನು. ಕಬ್ಬಿನ ಗರಿಗಳು ಅಲುಗಾಡುತ್ತಿದ್ದನ್ನು ಗಮನಿಸಿದ ತಂಡ ಹಂದಿ ಎಂದು ತಿಳಿದು ಫೈರಿಂಗ್ ಮಾಡಿದೆ. ಗುಂಡು ತಗುಲಿದ ಮಾದೇಶ ಗಂಭೀರ ಗಾಯಗೊಂಡಿದ್ದಾನೆ.
ಮಾದೇಶನ ಹೊಟ್ಟೆಯ ಭಾಗಕ್ಕೆ ಗುಂಡು ತಗುಲಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರು ಮಂದಿ ಯುವಕರ ಪೈಕಿ ಮೂವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.