ಶಿವಮೊಗ್ಗದಲ್ಲಿ ಮತ್ತೆ ದುಷ್ಕರ್ಮಿಗಳ ಅಟ್ಟಹಾಸ: ಮುಸ್ಲಿಮ್ ಮನೆಗಳ ಮೇಲೆ ಕಲ್ಲು ತೂರಾಟ, ವೃದ್ಧ ದಂಪತಿಗೆ ಹಲ್ಲೆ

Prasthutha|

ಶಿವಮೊಗ್ಗ: ಬಜರಂಗ ದಳದ ಕಾರ್ಯಕರ್ತ, ರೌಡಿ ಶೀಟರ್ ಹರ್ಷ ಹತ್ಯೆಯ ಬಳಿಕ ಶಾಂತವಾಗಿರುವ ಶಿವಮೊಗ್ಗದಲ್ಲಿ ಅಶಾಂತಿ ಮೂಡಿಸಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದ್ದು, ಶುಕ್ರವಾರ ರಾತ್ರಿ ದುಷ್ಕರ್ಮಿಗಳ ತಂಡ ಮುಸ್ಲಿಮ್ ಮೊಹಲ್ಲಾಗಳಿಗೆ ನುಗ್ಗಿ ಕಲ್ಲು ತೂರಾಟ ನಡೆಸಿ ದಾಂಧಲೆವೆಬ್ಬಿಸಿದ ಘಟನೆ ನಡೆದಿದೆ.

- Advertisement -

ಶಿವಮೊಗ್ಗದ ಮತ್ತೂರು –ಇಂದಿರಾನಗರದ ಸುಮಾರು 7-8 ಮುಸ್ಲಿಮ್ ಮನೆಗಳಿಗೆ ಕಲ್ಲು ತೂರಾಟ ನಡೆಸಲಾಗಿದ್ದು, ಮನೆಯ ಹೊರಗೆ ನಿಲ್ಲಿಸಿದ್ದ ಕಾರು, ಬೈಕ್ ಗಳಿಗೆ ಹಾನಿ ಮಾಡಲಾಗಿದೆ.

ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಕಾರೊಂದು ಇಂದಿರಾನಗರಕ್ಕೆ ಬಂದಿದ್ದು, ಅದಾದ ಬಳಿಕ 10-12 ಬೈಕ್ ಗಳಲ್ಲಿ ಬಂದ ತಂಡ, ಏಕಾಏಕಿ ಮುಸ್ಲಿಮ್ ಮನೆಗಳಿಗೆ ಕಲ್ಲು ತೂರಾಟ ನಡೆಸಿದೆ. ಇದರಿಂದ ಹಲವು ಮನೆಗಳ ಗಾಜು ಒಡೆದಿದೆ. ಜನರು   ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ.

- Advertisement -

ಇದೇ ವೇಳೆ ಆಸ್ಪತ್ರೆಗೆ ಹೋಗಿ ಆಟೋದಲ್ಲಿ ಮನೆಗೆ ಬರುತ್ತಿದ್ದ ಮುಸ್ಲಿಮ್ ಮಹಿಳೆ, ಅವರ ಪತಿಯ ಮೇಲೆ ದುಷ್ಕರ್ಮಿಗಳ ತಂಡ ದೊಣ್ಣೆಯಿಂದ ಹಲ್ಲೆ ನಡೆಸಿದೆ. ಯಾವಾಗಲೂ ಇದೇ ದಾರಿಯಲ್ಲಿ ಹೋಗುವ, ಪರಿಚಿತ ಮತ್ತೂರಿನ ನಿವಾಸಿಗಳೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತರು ದೂರಿದ್ದಾರೆ.

ಗಾಯಗೊಂಡ ಮಹಿಳೆ ಮತ್ತು ಆಕೆಯ ಪತಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಸಂತ್ರಸ್ತರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹರ್ಷ ಕೊಲೆಯ ಬಳಿಕ ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದರೂ ಪೊಲೀಸರ ಕಣ್ಣೆದುರೇ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಘಟನೆಯ ಬಳಿಕ ಇಂದಿರಾನಗರದಲ್ಲಿ ಭದ್ರತೆಗಾಗಿ ಎರಡು ಪೊಲೀಸ್ ವಾಹನಗಳನ್ನು ನಿಯೋಜಿಸಲಾಗಿದ್ದು, ಪಾಪ್ಯುಲರ್ ಫ್ರಂಟ್ ಇಂಡಿಯಾ ನಿಯೋಗ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದುಷ್ಕರ್ಮಿಗಳ ವಿರುದ್ಧ ದೂರು ದಾಖಲಿಸಲು ಕಾನೂನು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಂಘಟನೆಯ ಪದಾಧಿಕಾರಿಗಳು  ತಿಳಿಸಿದ್ದಾರೆ.



Join Whatsapp