ಸಂಚು ರೂಪಿಸಿ ಶಿವಾಜಿ ಪ್ರತಿಮೆಗೆ ಮಸಿ: 7 ಮಂದಿ ಸೆರೆ

Prasthutha|

ಬೆಂಗಳೂರು: ನಗರದ ಸ್ಯಾಂಕಿ ಕೆರೆ ಬಳಿಯ ಛತ್ರಪತಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಕೃತ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಚೇತನ್ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

- Advertisement -

ರಣಧೀರ ಪಡೆ ಅಧ್ಯಕ್ಷ ಚೇತನ್ ಗೌಡ ಜೊತೆಗೆ, ಮಾಜಿ ಶಾಸಕ ಟಿ.ನಾರಾಯಣ್ ಕುಮಾರ್ ಪುತ್ರ ಹಾಗೂ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿ ರಾಷ್ಟ್ರ ಅಧ್ಯಕ್ಷ ಗುರುದೇವ ನಾರಾಯಣ್ ಕುಮಾರ್, ವರುಣ್, ನವೀನ್ ಗೌಡ, ವಿನೋದ್, ಚೇತನ್ ಕುಮಾರ್, ಯೊಗೇಶ್‌ ನನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಳಿದವರ ಬಂಧನಕ್ಕೆ ಬಂಧಿತ ಆರೋಪಿಗಳಿಂದ ಮಾಹಿತಿಯನ್ನು ಪಡೆದು ಶೋಧ ನಡೆಸಲಾಗಿದೆ ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟಿದ್ದರಿಂದ ಆಕ್ರೋಶಗೊಂಡು ಕಳೆದ ಡಿ.16ರ ಮಧ್ಯರಾತ್ರಿ ಚೇತನ್ ಗೌಡ ಹಾಗೂ ಆತನ ಸಹಚರರ ಗುಂಪು ಶಿವಾಜಿ ಪ್ರತಿಮೆಗೆ‌ ಮಸಿ ಬಳಿದು ಅಪಮಾನ ಮಾಡಿದ್ದರು.ಈ‌ ಕೃತ್ಯ ಎಸಗಲು ನಾಲ್ಕು ದಿನಗಳ ಹಿಂದೆ ಸಂಚು ರೂಪಿಸಿದ್ದರು ಎಂದು ತಿಳಿಸಿದರು.

- Advertisement -

ನಾಲ್ಕು ದಿನಗಳ ಹಿಂದೆಯೇ ಕೃತ್ಯ ಎಸಗಲು ಸಂಚು ರೂಪಿಸಿದ್ದ ಆರೋಪಿಗಳು ಡಿ.14ರಿಂದ ಎರಡು ದಿನಗಳ ಕಾಲ ಸ್ಯಾಂಕಿ ಕೆರೆ ಬಳಿ ಬಂದು ಪರಿಶೀಲನೆ ನಡೆಸಿದ್ದರು. ಡಿ.15ರಂದು ಮತ್ತೆ ಬಂದಾಗ ಗಸ್ತಿನಲ್ಲಿದ್ದ ಪೊಲೀಸರು ವಾಪಸ್ ಕಳುಹಿಸಿದ್ದರು‌. ಪೂರ್ವನಿಯೋಜಿತವಾಗಿ ಎತ್ತರದಲ್ಲಿರುವ ಶಿವಾಜಿ ಪ್ರತಿಮೆಗೆ ಬಳಿ ಏಣಿ ಸಹ ತಂದಿಟ್ಟಿದ್ದರು. ಅಂದುಕೊಂಡಂತೆ ಕಳೆದ ಡಿ.16 ರಾತ್ರಿ ಕಾರು, ಎರಡು ಆಟೋ ಹಾಗೂ ಒಂದು ಬೈಕಿನಲ್ಲಿ ಒಟ್ಟು 13 ಮಂದಿ ಕನ್ನಡಪರ ಕಾರ್ಯಕರ್ತರು ಕೃತ್ಯ ಎಸಗಿದ್ದಾರೆ.

ಶಿವಾಜಿ ಪ್ರತಿಮೆಗೆ ವರುಣ್, ವಿನೋದ್ ಅವಮಾನ ಮಾಡಿದರೆ, ನವೀನ್ ಗೌಡ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ ಎನ್ನಲಾಗ್ತಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬೀಸಿದ್ದೇವೆ ಎಂದು ತಿಳಿಸಿದ್ದಾರೆ.

Join Whatsapp