ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾಧ್ವಜ ನೆಡಲು ಯತ್ನಿಸಿದ್ದ ಶಿವಸೇನೆ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಐವರು ಕಾರ್ಯಕರ್ತೆಯರನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.
ಮಹಾನಗರ ಪಾಲಿಕೆ ಎದುರು ಬೆಳಗಾವಿ ಮಾರ್ಕೆಟ್ ಠಾಣೆಯ ಎಸಿಪಿ ಸದಾಶಿವ ಕಟ್ಟಿಮನಿ ಅವರ ಜೊತೆ ಭಗವಾದ್ವಜ ನೆಡಲು ಯತ್ನಿಸಿದ ಶಿವಸೇನೆ ಹಾಗೂ ಎಂಇಎಸ್ ನಾಯಕರು ವಾಗ್ವಾದ ನಡೆದಿದೆ.
ಕನ್ನಡ ಪರ ಹೋರಾಟಗಾರರು ಕನ್ನಡ ಧ್ವಜ ಹಾರಿಸಿರುವುದನ್ನು ವಿರೋಧಿಸಿ, ಎಂಇಎಸ್ ಮತ್ತು ಶಿವಸೇನಾ ಕಾರ್ಯಕರ್ತರು ಕಾಲೇಜು ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಸಮಯದಲ್ಲೇ ಐವರು ಕಾರ್ಯಕರ್ತೆಯರು ಭಗವಾಧ್ವಜವಿದ್ದ ಕಂಬದೊಂದಿಗೆ ಪಾಲಿಕೆ ಮುಂಭಾಗಕ್ಕೆ ತೆರಳಲು ಯತ್ನಿಸಿದರು. ಅವರನ್ನು ಮಾರ್ಗ ಮಧ್ಯೆ ಪೊಲೀಸರು ತಡೆದಿದ್ದರಿಂದ, ಭಗವಾಧ್ವಜ ಹಾರಿಸುವ ಅವರ ಯತ್ನ ವಿಫಲವಾಯಿತು ಎನ್ನಲಾಗಿದೆ.
ನಂತರ ಬೆಳಗಾವಿ ಪೊಲೀಸರು ಧ್ವಜಸ್ತಂಭವನ್ನು ವಶಕ್ಕೆ ಪಡೆದು ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.