ತನ್ನ ಕ್ಷೇತ್ರದ ರಸ್ತೆಯನ್ನು ನಟಿ ಹೇಮಾಮಾಲಿನಿ ಕೆನ್ನೆಗೆ ಹೋಲಿಸಿದ ಶಿವಸೇನೆ ನಾಯಕ | ವಿವಾದವಾಗುತ್ತಿದ್ದಂತೆ ಕ್ಷಮೆಯಾಚನೆ !

Prasthutha|

ಮಹಾರಾಷ್ಟ್ರ: ಜಲಗಾಂವ್ ಜಿಲ್ಲೆಯ ತಮ್ಮ ಕ್ಷೇತ್ರದ ರಸ್ತೆಗಳನ್ನು ಬಾಲಿವುಡ್ ನಟಿ ಹೇಮಾಮಾಲಿನಿ ಅವರ ಕೆನ್ನೆಗೆ ಹೋಲಿಸಿರುವ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ , ಇದೀಗ ಹೇಳಿಕೆ ವಿವಾದವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.

- Advertisement -

ಗುಲಾಬ್ ರಾವ್ ಪಾಟೀಲ್ ಅವರು ಶನಿವಾರ ಉತ್ತರ ಮಹಾರಾಷ್ಟ್ರದ ತಮ್ಮ ಜಿಲ್ಲೆಯ ಬೋದ್ವಾಡ್ ನಗರ ಪಂಚಾಯತ್ ಚುನಾವಣೆಯ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಭಾಷಣದ ವೇಳೆ ಗುಲಾಬ್ ರಾವ್ ಪಾಟೀಲ್ ಅವರು ತಮ್ಮ ಕ್ಷೇತ್ರದ ರಸ್ತೆಗಳ ಗುಣಮಟ್ಟ ಎಷ್ಟಿದೆ ಎಂಬುವುದನ್ನು ತಮ್ಮ ವಿರೋಧಿಗಳಿಗೆ ಒಮ್ಮೆ ಭೇಟಿ ನೀಡಿ ನೋಡುವಂತೆ ತಿಳಿಸಿದ್ದರು. 30 ವರ್ಷಗಳಿಂದ ಶಾಸಕನಾಗಿರುವ ನನ್ನ ಕ್ಷೇತ್ರಕ್ಕೆ ಬಂದು ಒಮ್ಮೆ ರಸ್ತೆ ನೋಡಿ. ಅದು ಹೇಮಾಮಾಲಿನಿ ಅವರ ಕೆನ್ನೆಯಂತೆ ಇಲ್ಲದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಮತ್ತು ನೀರು ಸರಬರಾಜು ಮತ್ತು ನೈರ್ಮಲ್ಯ ಬಗ್ಗೆಯೂ ಹೇಳಿಕೆ ನೀಡಿದ್ದರು.

ಸಚಿವರ ವಿವಾದಾತ್ಮಕ ಹೇಳಿಕೆಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಗುಲಾಬ್ ರಾವ್ ಪಾಟೀಲ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ. ಈ ಕುರಿತಂತೆ ಧುಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿರಲಿಲ್ಲ. ನನ್ನ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ನಾನು ಛತ್ರಪತಿ ಶಿವಾಜಿ ಮಹಾರಾಜರನ್ನು ಆರಾಧಿಸುವ ಶಿವಸೇನೆಗೆ ಸೇರಿದವನು. ಮಹಿಳೆಯರನ್ನು ಗೌರವಿಸುವುದನ್ನು ಪಕ್ಷದ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ನಮಗೆ ಕಲಿಸಿದ್ದಾರೆ ಎಂದು ಹೇಳಿದ್ದಾರೆ.

Join Whatsapp