ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯು ಸಕಲೇಶಪುರ-ಶಿರಾಡಿ ಮಾರ್ಗದಲ್ಲಿ ಪದೇಪದೇ ಭೂ ಕುಸಿತದ ಪರಿಣಾಮ ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದು, ಕರಾವಳಿಯ ವಾಣಿಜ್ಯ ಚಟುವಟಿಕೆಗೆ ದೊಡ್ಡ ಹೊಡೆತದ ಭೀತಿ ಎದುರಾಗಿದೆ.
ಶಿರಾಡಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿದ ಪರಿಣಾಮ ರಫ್ತು, ಆಮದು ಮತ್ತು ಕೃಷಿ ಸರಕು, ಎಲ್ ಪಿಜಿ ಸಾಗಾಟಕ್ಕೂ ಸಮಸ್ಯೆಯಾಗಲಿದೆ.
ಬೆಂಗಳೂನಿಂದ ಮಂಗಳೂರಿಗೆ ಬರಬೇಕಾದರೆ ಸುತ್ತಿಬಳಸಿ ಚಾರ್ಮಾಡಿ, ಕೊಟ್ಟಿಗೆಹಾರ, ಅರಕಲಗೂಡು, ಕುಶಾಲನಗರ ಮಾರ್ಗವಾಗಿಯೂ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ ಗಳು ಸಂಚರಿಸುತ್ತಿದೆ. ಆದರೆ ಹೆದ್ದಾರಿಯಲ್ಲಿ ಸಂಚರಿಸಿದಷ್ಟು ಸುಲಭವಾಗಿ ಸಾಗಲು ಸಾಧ್ಯವಾಗುತ್ತಿಲ್ಲ. ಬಸ್ ಪ್ರಯಾಣ ದರ ಹೆಚ್ಚಳದ ಹೊರೆಯನ್ನಷ್ಟೇ ಅಲ್ಲ, ಸುತ್ತಿ ಬಳಸಿ ತೆರಳಬೇಕಿರುವುದರಿಂದ ಸಮಯವೂ ವ್ಯರ್ಥವಾಗುತ್ತದೆ.
ಸಕಲೇಶಪುರ-ದೋಣಿಗಾಲ್ ನಡುವೆ ಭೂ ಕುಸಿತದ ಸ್ಥಳದ ದುರಸ್ತಿ ಕಾಮಗಾರಿ ಪ್ರಾರಂಭಗೊಂಡಿದ್ದರೂ ಮಳೆಯ ಆರ್ಭಟ ಅಡ್ಡಿಯಾಗಿದೆ. ಎಷ್ಟೇ ಮರಳಿನ ಮೂಟೆ, ಎಂ ಸ್ಯಾಂಡ್ ಚೀಲಗಳನ್ನು ಹಾಕಿ ಭೂ ಕುಸಿತ ತಡೆಗೆ ಪ್ರಯತ್ನಿಸುತ್ತಿದ್ದರೂ ಸರಿಯಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಶಿರಾಡಿ ಸಂಚಾರ ಪುನಾರಂಭಗೊಳ್ಳುವ ಸಾಧ್ಯತೆ ಕಡಿಮೆ ಇದೆ.
ಪದೇಪದೇ ಶಿರಾಡಿಯಲ್ಲಿ ವಾಹನ ಸಂಚಾರ ಸಮಸ್ಯೆಯಾಗುತ್ತಿರುವುದು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸೂಕ್ತವಾಗಿ ಈ ಭಾಗವನ್ನು ನಿರ್ವಹಣೆ ಮಾಡದಿರುವುದು ಈ ಅವ್ಯವಸ್ಥೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.