ಮಡಗಾಸ್ಕರ್: ಸರಕು ಹಡಗೊಂದು ಮುಳುಗಡೆಯಾದ ಪರಿಣಾಮ ಕನಿಷ್ಠ 17ಮಂದಿ ಮೃತಪಟ್ಟು, 68 ಮಂದಿ ಕಣ್ಮರೆಯಾಗಿರುವ ಘಟನೆ ಹಿಂದೂ ಮಹಾಸಾಗರದಲ್ಲಿರುವ ಮಡಗಾಸ್ಕರ್ ದ್ವೀಪದ ಈಶಾನ್ಯ ಕರಾವಳಿಯಲ್ಲಿ ಸಂಭವಿಸಿದೆ. ನತದೃಷ್ಠ ಹಡಗಿನಲ್ಲಿ 130ಕ್ಕೂ ಅಧಿಕ ಮಂದಿ ಅನಧಿಕೃತವಾಗಿ ಪ್ರಯಾಣಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು, 45 ಮಂದಿಯನ್ನು ರಕ್ಷಿಸಲಾಗಿದೆ ಎಂದು ರಿವರ್’ಪೋರ್ಟ್ ವರದಿ ಮಾಡಿದೆ.
ಫ್ರಾನ್ಸಿಯಾ ಹೆಸರಿನ ಹಡಗು ಅಂಟನಾಂಬೆ ನಗರದ ಬಂದರಿನಿಂದ ಸೋನಿರೆನಾ ಲೊಂಗೊ ಬಂದರ್’ಗೆ ಸೋಮವಾರ ಪ್ರಯಾಣ ಆರಂಭಿಸಿತ್ತು. ಫ್ರಾನ್ಸಿಯಾ ಹಡಗು ಸರಕು ವಿಭಾಗದಲ್ಲಿ ನೊಂದಾಯಿಸಲ್ಪಟ್ಟಿತ್ತು. ಈ ಕಾರಣದಿಂದ ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ಇರಲಿಲ್ಲ. ಮತ್ತೊಂದೆಡೆ ಹಡಗು ಪ್ರಯಾಣ ಆರಂಭಿಸಿದ್ದ ಅಂಟನಾಂಬೆ ಬಂದರು ಕೂಡ ಕಾರ್ಯಾಚರಣೆ ಸಂಬಂಧ ಅಧಿಕೃತವಾಗಿ ಅನುಮತಿ ಪಡೆದಿಲ್ಲ ಎಂದು ರಿವರ್’ಪೋರ್ಟ್ ಮಹಾನಿರ್ದೇಶಕ ಜೀನ್ ಎಡ್ಮಂಡ್ ತಿಳಿಸಿದ್ದಾರೆ.
ಫ್ರಾನ್ಸಿಯಾ ಹಡಗಿನಲ್ಲಿ ಸಣ್ಣ ತೂತು ಕಾಣಿಸಿಕೊಂಡ ಬಳಿಕ ಇಂಜಿನ್ ಕೋಣೆಗೆ ನೀರು ನುಗ್ಗಿದರ ಪರಿಣಾಮ ಭಾರಿ ದುರಂತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಡ್ಮಂಡ್ ಹೇಳಿದ್ದಾರೆ. ರಾಷ್ಟ್ರೀಯ ನೌಕಾಪಡೆಯ ಮೂರು ಸಣ್ಣ ಬೋಟ್’ಗಳಲ್ಲಿ ರಕ್ಷಣಾ ಕಾರ್ಯಚರಣೆ ನಡೆಸಲಾಗುತ್ತಿದ್ದು, ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿದೆ.