ಸಂತ್ರಸ್ತ ಬಾಲಕಿಗೆ ಬೆದರಿಕೆ: ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನ ವಿರುದ್ಧ FIR ದಾಖಲು

Prasthutha|

ಇಸ್ಲಾಮಾಬಾದ್: ಅತ್ಯಾಚಾರ ಪ್ರಕರಣದ ಆರೋಪಿಯ ಸಹಾಯಕ್ಕೆ ನಿಂತ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಹಿರಿಯ ಲೆಗ್‌ಸ್ಪಿನ್ನರ್ ಯಾಸಿರ್ ಶಾ ವಿರುದ್ಧ ಇಸ್ಲಾಮಾಬಾದ್’ನ ಶಾಲಿಮಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗಸ್ಟ್ 14ರಂದು ಘಟನೆ ನಡೆದಿದ್ದು, ಸಂತ್ರಸ್ತ ಬಾಲಕಿ ತಡವಾಗಿ ದೂರು ದಾಖಲಿಸಿದ್ದಾಳೆ.

- Advertisement -

‘ಯಾಸಿರ್‌ ಶಾ ಸ್ನೇಹಿತ ಫರ್ಹಾನ್‌ ಎಂಬಾತ ಬಂದೂಕು ತೋರಿಸಿ ನನ್ನನ್ನು ಅಪಹರಿಸಿ ಅತ್ಯಾಚಾರ ಮಾಡಿ, ವೀಡಿಯೋ ಚಿತ್ರೀಕರಿಸಿದ್ದಾನೆ’ ಎಂದು 14 ವರ್ಷ ಪ್ರಾಯದ ಸಂತ್ರಸ್ತ ಬಾಲಕಿ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಾಸಿರ್‌ ಶಾ ಹಾಗೂ ಸ್ನೇಹಿತ ಫರ್ಹಾನ್‌ ವಿರುದ್ಧ 292-B, 292-C  ಹಾಗೂ 376 PPC ಕಾಯ್ದೆಗಳ ಅಡಿಯಲ್ಲಿ ಅಪಹರಣ, ಕಿರುಕುಳ ಹಾಗೂ ಬೆದರಿಕೆ ಆರೋಪದಡಿಯಲ್ಲಿ ಶಾಲಿಮಾಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ನಡೆದ ಬಳಿಕ ಪೊಲೀಸ್ ದೂರು ನೀಡದಂತೆ ಯಾಸಿರ್‌ ಶಾ ಬೆದರಿಕೆ ಹಾಕಿದ್ದ. ಅತ್ಯಾಚಾರದ ವಿಷಯವನ್ನು ಯಾರಿಗಾದರೂ ತಿಳಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಶೇರ್‌ ಮಾಡುತ್ತೇವೆ ಎಂದು ಯಾಸಿರ್‌ ಶಾ, ಫರ್ಹಾನ್‌ ಬೆದರಿಕೆ ಹಾಕಿದ್ದರು ಎಂದು ಬಾಲಕಿ ಆರೋಪಿಸಿದ್ದಾರೆ. ಯಾಸಿರ್‌ ಶಾರನ್ನು ವಾಟ್ಸಾಪ್ ಕಾಲ್‌’ನಲ್ಲಿ ಸಂಪರ್ಕಿಸಿ ಸಹಾಯ ಮಾಡುವಂತೆ ಬೇಡಿಕೊಂಡೆ, ಅವರು ಯಾರಿಗೂ ವಿಷಯ ತಿಳಿಸಬೇಡ, ನಿನಗೆ ಒಂದು ಫ್ಲ್ಯಾಟ್‌ ಹಾಗೂ 18 ವರ್ಷಗಳ ಕಾಲ ಪ್ರತಿ ತಿಂಗಳು ಖರ್ಚಿಗೆ ಹಣ ಕೊಡುವುದಾಗಿ ಹೇಳಿದರು ಎಂದು ಬಾಲಕಿ ಆರೋಪಿಸಿದ್ದಾರೆ.

- Advertisement -

ಘಟನೆ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ‘ನಮ್ಮ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರನೋರ್ವನ ವಿರುದ್ಧ ಕೆಲವೊಂದು ಆರೋಪಗಳು ಕೇಳಿ ಬಂದಿವೆ. ಈ ಕುರಿತು PCB  ಅಧಿಕಾರಿಗಳು ಸಂಬಂಧಪಟ್ಟವರಿಂದ ಮಾಹಿತಿ ಕಲೆಹಾಕುತ್ತಿದ್ದು, ಬಳಿಕ ಸೂಕ್ತ ಕ್ರಮ ಜರುಗಿಸಲಿದ್ದೇವೆ ಎಂದು ಹೇಳಿದೆ.

Join Whatsapp