ಶಿವಮೊಗ್ಗದಲ್ಲಿ ರಂಗೇರಿದ ಚುನಾವಣಾ ಕಣ: ಪ್ರಚಾರ ಆರಂಭಿಸಿದ ಶಿವರಾಜ್ ಕುಮಾರ್ ದಂಪತಿ

Prasthutha|

ಶಿವಮೊಗ್ಗ: ಶಿವಮೊಗ್ಗದಿಂದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪತ್ನಿ ಗೀತಾ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಆರಂಭಿಸಿದ್ದಾರೆ.

- Advertisement -

ತೆರೆದ ಜೀಪ್‌ನಲ್ಲಿ ಬೆಂಬಲಿಗರೊಂದಿಗೆ ಶಿವರಾಜ್ ಕುಮಾರ್, ಸಚಿವ ಮಧು ಬಂಗಾರಪ್ಪ ಮತ್ತು ಗೀತಾ ರೋಡ್ ಶೋ ನಡೆಸಿದ್ದು, ಮತ ಯಾಚನೆ ಮಾಡಿದ್ದಾರೆ.

ಶಿವರಾಜ್ ಕುಮಾರ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಅವರಿಗೆ ಸಾಥ್ ಕೊಟ್ಟಿದ್ದಾರೆ. ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಮಗಳೂ ಆಗಿರುವ ಗೀತಾ ಶಿವರಾಜ್ ಕುಮಾರ್ ಈ ಹಿಂದೊಮ್ಮೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

- Advertisement -

ಆದರೆ ಈ ಬಾರಿ ಹೇಗಾದರೂ ಮಾಡಿ ಪತ್ನಿಯನ್ನು ಗೆಲ್ಲಿಸಿ ಸಂಸತ್ ಗೆ ಕಳುಹಿಸುವ ಪಣ ತೊಟ್ಟಿರುವ ಶಿವಣ್ಣ ಈಗಲೇ ಬಿರುಸಿನ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿರುವ ಶಿವರಾಜ್ ಕುಮಾರ್ ಪತ್ನಿ ಗೀತಾರನ್ನು ಗೆಲ್ಲಿಸಿಕೊಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಬಿಸಿನಲ್ಲಿಯೇ ಶಿವಮೊಗ್ಗದ ಹಲವು ಬೀದಿಗಳನ್ನು ಸುತ್ತಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಶಿವಮೊಗ್ಗದ ಭದ್ರಾವತಿಯ ಕಾರೇಹಳ್ಳಿ ಗ್ರಾಮದಿಂದ ಪ್ರಚಾರ ಕಾರ್ಯ ಆರಂಭಿಸಿದ ಗೀತಾ ಶಿವರಾಜ್​ಕುಮಾರ್​ ಸ್ಥಳೀಯ ನಾಯಕರು ಸಾಥ್​ ನೀಡಿದ್ದಾರೆ.

ಜನರನ್ನು ಉದ್ಧೇಶಿಸಿ ಮಾತನಾಡಿದ ಗೀತಾ ಶಿವರಾಜ್​ಕುಮಾರ್, ನಾನು ಭದ್ರಾವತಿಯ ಕಾರೇಹಳ್ಳಿ ಗ್ರಾಮದಿಂದ ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇನೆ. ಜನರು ಉತ್ಸಾಹಭರಿತರಾಗಿದ್ದು, ನಾನು ಗೆಲ್ಲುತ್ತೇನೆ ಎಂಬ ಭರವಸೆ ನನಗಿದೆ. ನನ್ನ ಪಕ್ಷದ ಮಾತಿನಂತೆ ಕೆಲಸ ಮಾಡುತ್ತೇನೆ. ಶಿವಮೊಗ್ಗ ನನ್ನ ತಂದೆಯವರ ಕ್ಷೇತ್ರ ಅವರ ಸೇವೆ ಮತ್ತು ನನ್ನ ಸಹೋದರನ ಸೇವೆ ನನಗೆ ಚುನಾವಣೆಯಲ್ಲಿ ಸಹಾಯ ಮಾಡುತ್ತದೆ. ಪ್ರತಿ ಗ್ರಾಮದಲ್ಲೂ ಪ್ರಚಾರ ಮಾಡುತ್ತೇನೆ. ನಾನು ಯಾವುದೇ ಸ್ಟಾರ್ ಪ್ರಚಾರಕರನ್ನು ಆಹ್ವಾನಿಸಿಲ್ಲ. ನನ್ನನ್ನು ಬೆಂಬಲಿಸುವವರನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ನಾವು ಭಧ್ರಾವತಿಯ ಕಾರೇಹಳ್ಳಿ ಗ್ರಾಮದಿಂದ ಪ್ರಚಾರ ಆರಂಭಿಸುತ್ತಿದ್ದೇವೆ. ಶಿವಮೊಗ್ಗದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಇದೆ. 24ರಿಂದ ನಿರಂತರ ಪ್ರಚಾರ ಮಾಡುತ್ತೇವೆ. ನಾನು ನನ್ನ ಶೂಟಿಂಗ್ ಜೊತೆಗೆ ಪ್ರಚಾರ ಮಾಡುತ್ತೇನೆ ಇದಕ್ಕಾಗಿ ಸಮಯವನ್ನು ಸರಿದೂಗಿಸಬೇಕಾಗಿದೆ ಎಂದು ನಟ ಶಿವರಾಜ್​ಕುಮಾರ್​ ಹೇಳಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಪರ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳೂ ಪ್ರಚಾರ ನಡೆಸುವ ಸಾಧ‍್ಯತೆಯಿದೆ. ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರು, ವಿತರಕ ಸಂಘದವರು ಗೀತಾ ಶಿವರಾಜ್ ಕುಮಾರ್ ಗೆ ಬೆಂಬಲ ವ್ಯಕ್ತಪಡಿಸಿವೆ.



Join Whatsapp