ಬೆಂಗಳೂರು: ಚುನಾವಣಾ ನೀತಿ ಸಂಹಿತೆ ರಾಜಕಾರಣಿಗಳು, ಅಧಿಕಾರಿಗಳಿಗೆ ಮಾತ್ರವಲ್ಲದೆ ಜನ ಸಾಮಾನ್ಯರಿಗೂ ಅನ್ವಯ ಆಗುತ್ತದೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸಭೆ-ಸಮಾರಂಭ ಅಥವಾ ಮದುವೆ ಕಾರ್ಯಕ್ರಮ ನಡೆಸಬೇಕಿದ್ದರೆ ಸರ್ಕಾರದಿಂದ ಅನುಮತಿ ಪಡೆಯೋದು ಕಡ್ಡಾಯವಾಗಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.
ಮದುವೆ, ಜಾತ್ರೆ, ಸಮಾರಂಭ, ನಡೆಸೋದಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಇರುವ ಎಆರ್‌ಒಗಳ ಬಳಿ ಮೊದಲೇ ಅನುಮತಿ ಪಡೆಯಬೇಕಿದೆ. ಈ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸುವಂತಿಲ್ಲ.
ಕಾರ್ಯಕ್ರಮಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವುದು, ರಾಜಕೀಯ ಪಕ್ಷಗಳ ಬಾವುಟ, ಚಿಹ್ನೆಗಳನ್ನು ಬಳಸುವುದು, ಮತಯಾಚಿಸುವುದು ಕಾನೂನು ಬಾಹಿರವಾಗಿದೆ. ಮತದಾರರಿಗೆ ಭರವಸೆ, ಆಮಿಷ ಒಡ್ಡುವ ಕುರಿತು ದೂರು ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.