ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ

Prasthutha|

​​​​​​​ಮುಂಬೈ: ಟಿ20 ಸರಣಿಯ ಬಳಿಕ ಅಕ್ಟೋಬರ್‌ 6ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.

- Advertisement -

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಎಲ್ಲಾ ಆಟಗಾರರಿಗೂ, ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಆದರೆ ಮೀಸಲು ಆಟಗಾರರಾಗಿ ಹೆಸರಿಸಲಾಗಿದ್ದ ಶ್ರೇಯಸ್ ಅಯ್ಯರ್, ದೀಪಕ್ ಚಹಾರ್ ಮತ್ತು ರವಿ ಬಿಷ್ಣೋಯ್ ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ನಿರೀಕ್ಷೆಯಂತೆಯೇ ಏಕದಿನ ತಂಡವನ್ನು ಶಿಖರ್‌ ಧವನ್‌ ಮುನ್ನಡೆಸಲಿದ್ದು, ಶ್ರೇಯಸ್‌ ಅಯ್ಯರ್‌ಗೆ ಉಪ ನಾಯಕನ ಸ್ಥಾನ ನೀಡಲಾಗಿದೆ. ದೇಸಿ ಕ್ರಿಕೆಟ್‌ನಲ್ಲಿ ಗಮನ ಸೆಳೆದಿರುವ ಬಂಗಾಳದ ವೇಗದ ಬೌಲರ್‌ ಮುಕೇಶ್‌ ಕುಮಾರ್‌ ಮತ್ತು ಮಧ್ಯಪ್ರದೇಶದ ಬ್ಯಾಟರ್‌ ರಜತ್‌ ಪಾಟೀದಾರ್‌ ಹೊಸ ಮುಖಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯ ಅಕ್ಟೋಬರ್‌ 6ರಂದು ಲಖನೌದಲ್ಲಿ ನಡೆಯಲಿದೆ. ಎರಡು ಮತ್ತು ಮೂರನೇ ಪಂದ್ಯ ಅಕ್ಟೋಬರ್‌ 9 ಮತ್ತು 11 ರಂದು ಕ್ರಮವಾಗಿ ರಾಂಚಿ ಹಾಗೂ ದೆಹಲಿಯಲ್ಲಿ ಆಯೋಜನೆಯಾಗಿದೆ.

- Advertisement -

ನ್ಯೂಜಿಲೆಂಡ್‌ ‘ಎ’ ಎದುರಿನ ಸರಣಿಯಲ್ಲಿ ಮಿಂಚಿದ್ದ ಮುಕೇಶ್‌ ಅವರು, ಇರಾನಿ ಟ್ರೋಫಿ ಪಂದ್ಯದಲ್ಲೂ ತಮ್ಮ ಸಾಮರ್ಥ್ಯ ತೋರಿದ್ದರು. ಪಾಟೀದಾರ್ ಅವರು ರಣಜಿ ಟ್ರೋಫಿ ಫೈನಲ್‌ ಮತ್ತು ನ್ಯೂಜಿಲೆಂಡ್‌ ‘ಎ’ ಎದುರಿನ ಟೆಸ್ಟ್‌ ಪಂದ್ಯದಲ್ಲಿ ಶತಕ ಗಳಿಸಿದ್ದರು. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಆಡುತ್ತಿರುವ ಪಾಟೀದಾರ್‌, ಈ ಋತುವಿನ ಟೂರ್ನಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಎದುರು ಶತಕ (ಅಜೇಯ 112) ಗಳಿಸಿ ಗಮನ ಸೆಳೆದಿದ್ದರು.

ಏಕದಿನ ಕ್ರಿಕೆಟ್‌ ಸರಣಿಗೆ ಪ್ರಕಟಿಸಲಾದ ತಂಡ

ತಂಡ ಹೀಗಿದೆ: ಶಿಖರ್‌ ಧವನ್‌ (ನಾಯಕ), ಋತುರಾಜ್‌ ಗಾಯಕವಾಡ್, ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ರಜತ್‌ ಪಾಟೀದಾರ್‌, ರಾಹುಲ್‌ ತ್ರಿಪಾಠಿ, ಇಶಾನ್‌ ಕಿಶನ್, ಸಂಜು ಸ್ಯಾಮ್ಸನ್, ಶಹಬಾಜ್‌ ಅಹ್ಮದ್‌, ಶಾರ್ದೂಲ್‌ ಠಾಕೂರ್‌, ಕುಲದೀಪ್‌ ಯಾದವ್, ರವಿ ಬಿಷ್ಣೋಯಿ, ಮುಕೇಶ್‌ ಕುಮಾರ್, ಆವೇಶ್‌ ಖಾನ್, ಮೊಹಮ್ಮದ್‌ ಸಿರಾಜ್, ದೀಪಕ್‌ ಚಾಹರ್‌

Join Whatsapp