ಶಾರ್ಜಾ: ಕುಟುಂಬಗಳಿಗೆ ಮಾತ್ರವೇ ಸೀಮಿತಗೊಳಿಸಲಾಗಿರುವ ಪ್ರದೇಶದಿಂದ ಸುಮಾರು 6 ಸಾವಿರಕ್ಕೂ ಅಧಿಕ ಕಾರ್ಮಿಕರು ಮತ್ತು ಬ್ಯಾಚುಲರ್ ಗಳನ್ನು ಶಾರ್ಜಾದ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಎಮಿರೇಟ್ ನಾದ್ಯಂತ ಅಧಿಕಾರಿಗಳು ತಪಾಸಣೆಯನ್ನು ನಡೆಸಿದ್ದು, ಈ ಸಂದರ್ಭದಲ್ಲಿ ಈ ಕ್ರಮಕೈಗೊಳ್ಳಲಾಗಿದೆಯೆಂದು ಪುರಸಭೆ ತಿಳಿಸಿದೆ.
ಕುಟುಂಬಗಳಿಗಾಗಿ ಮಾತ್ರವೇ ಸೀಮಿತಗೋಳಿಸಲಾಗಿರುವ ಪ್ರದೇಶದಲ್ಲಿ ಕನಿಷ್ಠ 6561 ಬ್ಯಾಚುಲರ್ ಗಳು ನೆಲೆಸುತ್ತಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶಾರ್ಜಾ ಪುರಸಭೆಯ ಮಹಾನಿರ್ದೇಶಕ ತಾಬಿತ್ ಅಲ್ ತುರೈಫಿ ತಿಳಿಸಿದ್ದಾರೆ.
ತಪಾಸಣೆಯ ವೇಳೆ ಅನಧಿಕೃತ ವಿಭಾಗಗಳು ಮತ್ತು ಅಕ್ರಮ ವಿದ್ಯುತ್ ಸಂಪರ್ಕಗಳು ಪತ್ತೆಯಾಗಿದ್ದು ಅವುಗಳನ್ನು ಕಡಿತಗೊಳಿಸಲಾಗಿದೆ ಎಂದು ಪುರಸಭೆಯು ಸಾಮಾಜಿಕ ಜಾಲತಾಣಗಳಲ್ಲಿ ಹಾಕಾಲಾದ ಪೋಸ್ಟ್ ಮೂಲಕ ಪ್ರಕಟಿಸಿದೆ.
ಹಲವು ರೀತಿಯ ಉಲ್ಲಂಘನೆಗಳು ತಪಾಸಣೆಯ ವೇಳೆ ಪತ್ತೆಯಾಗಿದೆ. ಕೆಲವರು ತಮ್ಮ ನಿವಾಸದಲ್ಲಿ ಕಾರು ರಿಪೇರಿ ಶಾಪ್ ಮತ್ತು ಆಹಾರ ಮಳಿಗೆಗಳನ್ನು ಸ್ಥಾಪಿಸಿರುವುದು ಪತ್ತೆಯಾಗಿದೆ. ಅಪರಿಚಿತ ಮೂಲಗಳ ವಿದ್ಯುತ್ ಸಾಮಾಗ್ರಿಗಳನ್ನು ಅಸಮರ್ಪಕವಾಗಿ ಕೂಡಿಡಲಾಗಿರುವುದು ಕಂಡುಬಂದಿದೆ ಎಂದು ಅಲ್ ತುರೈಫಿ ತಿಳಿಸಿದರು.