ದುಬೈ: ಐಸಿಸಿ ಟಿ-20 ವಿಶ್ವಕಪ್’ನ ಮೊದಲ ದಿನವೇ ಬಾಂಗ್ಲಾದೇಶ ತಂಡದ ಆಲ್ರೌಂಡರ್ ಶಾಕಿಬ್ ಅಲ್ ಹಸನ್, ವಿಶ್ವ ದಾಖಲೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 108ಕ್ಕೆ ಏರಿಸಿದ ಶಾಕಿಬ್ , ಆ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಒಮಾನ್’ ನ ಅಲ್ ಅಮರೆತ್ ಮೈದಾನದಲ್ಲಿ ಭಾನುವಾರ ನಡೆದ ಗ್ರೂಪ್ ‘ಬಿ’ ವಿಭಾಗದ ಎರಡನೇ ಲೀಗ್ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡದ ಎದುರು ಶಾಕಿಬ್ ಎರಡು ವಿಕೆಟ್ ಪಡೆಯುವ ಮೂಲಕ ಶ್ರೀಲಂಕಾದ ಬೌಲಿಂಗ್ ಸೆನ್ಸೇಶನ್ ಆಗಿದ್ದ ಲಸಿತ್ ಮಾಲಿಂಗ ಹೆಸರಿನಲ್ಲಿದ್ದ ದಾಖಲೆಯನ್ನು ತಮ್ಮದಾಗಿಸಿಕೊಂಡರು.
ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್’ನಲ್ಲಿ ಒಟ್ಟು 84 ಪಂದ್ಯಗಳನ್ನಾಡಿದ್ದ ಮಾಲಿಂಗ, 107 ವಿಕೆಟ್ಗಳನ್ನು ಪಡೆದಿದ್ದರು.
ನ್ಯೂಜಿಲೆಂಡ್ನ ಟಿಮ್ ಸೌಥಿ ಮೂರನೇ ಸ್ಥಾನದಲ್ಲಿದ್ದು ಒಟ್ಟು 99 ವಿಕೆಟ್ಗಳನ್ನು ಪಡೆದಿದ್ದಾರೆ. ಪಾಕಿಸ್ತಾನದ ಶಾಹಿದ್ ಅಫ್ರಿದಿ 98 ವಿಕೆಟ್ ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ 95 ವಿಕೆಟ್ಗಳನ್ನು ಪಡೆಯುವ ಮೂಲಕ
ನಂತರದ ಸ್ಥಾನಗಳಲ್ಲಿದ್ದಾರೆ.
ಇನ್ನು ಟೀಮ್ ಇಂಡಿಯಾ ಪರ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ 49 ಪಂದ್ಯಗಳಿಂದ 63 ವಿಕೆಟ್ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಕ್ಯಾರಿಯರ್’ನ ತಮ್ಮ 89ನೇ ಪಂದ್ಯದಲ್ಲಿ, ಸ್ಕಾಟ್ಲೆಂಡ್ ವಿರುದ್ಧ ಒಟ್ಟು 4 ಓವರ್ ಎಸೆದ ಶಾಕಿಬ್ 17 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.
ಮೂರನೇ ಓವರ್’ನಲ್ಲಿ ಮೂರು ಎಸೆತಗಳ ಅಂತರದಲ್ಲಿ ರಿಚೀ ಬ್ಯಾರಿಂಗ್ಟನ್ ಮತ್ತು ಮೈಕಲ್ ಲೀಸ್ಕ್ ವಿಕೆಟ್ ಪಡೆದ ಶಾಕಿಬ್, ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲಿ ತಮ್ಮ ಒಟ್ಟು ವಿಕೆಟ್ಗಳ ಗಳಿಯನ್ನು 108ಕ್ಕೆ ವಿಸ್ತರಿಸಿಕೊಂಡರು.
ಬಾಂಗ್ಲಾ ತಂಡಕ್ಕೆ ಸೋಲು
ಶಾಕಿಬ್ ಅಲ್ ಹಸನ್ ವಿಶ್ವ ದಾಖಲೆಯ ನಡುವೆಯೂ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ, ಸ್ಕಾಟ್ಲೆಂಡ್’ಗೆ 6 ರನ್’ಗಳಿಂದ ಶರಣಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಸ್ಕಾಟ್ಲೆಂಡ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 140 ರನ್ ಗಳಿಸಿತ್ತು.
ಆದರೆ, ಕಳಪೆ ಬ್ಯಾಟಿಂಗ್ ಪರಿಣಾಮ ರನ್ಚೇಸ್ನಲ್ಲಿ ಎಡವಿದ ಬಾಂಗ್ಲಾ ತಂಡ 20 ಓವರ್ಗಳಲ್ಲಿ 7 ವಿಕೆಟ್ಗೆ 134 ರನ್ಗಳಿಸಲಷ್ಟೇ ಶಕ್ತವಾಯಿತು.
ಅಂತಿಮ ಓವರ್’ನಲ್ಲಿ ಬಾಂಗ್ಲಾ ಗೆಲುವಿಗೆ 26 ರನ್ಗಳ ಅಗತ್ಯವಿತ್ತು. ಮೆಹ್ದಿ ಹಸನ್ (13) ಮತ್ತು ಮೊಹಮ್ಮದ್ ಸೈಫುದ್ದೀನ್ (5) ಕೊನೇ ಓವರ್ನಲ್ಲಿ 20 ರನ್ ಗಳಿಸಿದರೂ ನಿಗದಿತ ಗುರಿ ತಲುಪಲು ಸಾಧ್ಯವಾಗಲಿಲ್ಲ.
ಒಮಾನ್’ಗೆ ಭರ್ಜರಿ ಗೆಲುವು
ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಅತಿಥೇಯ ಒಮಾನ್ ತಂಡ ಪಪುವಾ ನ್ಯೂ ಗಿನಿ ಎದುರು 10 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ‘ಬಿ’ ಗುಂಪಿನಲ್ಲಿ ಒಮಾನ್ ಮತ್ತು ಸ್ಕಾಟ್ಲೆಂಡ್ ತಂಡಗಳು ಗೆಲುವಿನ ಆರಂಭ ಪಡೆದಿವೆ.
ಟೂರ್ನಿಯ ಲೀಗ್’ ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್ 12 ಹಂತಕ್ಕೆ ಅರ್ಹತೆ ಪಡೆಯಲಿವೆ.