ಯುವತಿಯ ಆತ್ಮಹತ್ಯೆ| ಎಎಸ್ಐ ಸೇರಿ 8 ಮಂದಿ ವಿರುದ್ಧ ಕೇಸ್

Prasthutha|

ಮೈಸೂರು: ಪ್ರಿಯತಮ ಮನೆಯ ಮುಂದೆ ಬಂದು ಗಲಾಟೆ ಮಾಡಿದ್ದರಿಂದ ನೊಂದ ಯುವತಿಯು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧಿಸಿದಂತೆ ಎಎಸ್ಐ ಸೇರಿದಂತೆ 8 ಮಂದಿ ವಿರುದ್ಧ ನಂಜನಗೂಡು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

- Advertisement -


ಯುವತಿಯು ಆತ್ಮಹತ್ಯೆಗೂ ಮುನ್ನ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಆಕೆಯ ಸಂಕಷ್ಟಕ್ಕೆ ಪೊಲೀಸರು ಸರಿಯಾಗಿ ಸ್ಪಂದಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣದಲ್ಲಿ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಎಎಸ್ ಐ ಶಿವರಾಜು ಕರ್ತವ್ಯ ಲೋಪ ಎಸಗಿದ್ದ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಂಜನಗೂಡು ಠಾಣೆಯ ವೃತ್ತ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ಸುರೇಶ್, ಗುರುಮಲ್ಲು, ಲೋಕೇಶ್, ಜಡೆ ಮಲ್ಲಯ್ಯ, ಮಲ್ಲಿಕಾರ್ಜುನಯ್ಯ, ಗೌರಮ್ಮ, ರಾಜಮ್ಮ ಸೇರಿ ಎಎಸ್ಐ ಶಿವರಾಜು ವಿರುದ್ಧ ಎಫ್ಐಆರ್ ದಾಖಲಾಗಿದೆ.


ನಂಜನಗೂಡು ತಾಲೂಕು ಚೆನ್ನಪಟ್ಟಣದ ಯುವತಿಯನ್ನು ಅದೇ ಗ್ರಾಮದ ಲೋಕೇಶ್ ಎಂಬಾತ 5 ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆ ಆಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ಮಧ್ಯೆ ಸುರೇಶ್ ಎಂಬಾತ ಆಕೆಯ ಜೊತೆ ಮಾತನಾಡಿ ಮಧ್ಯಪ್ರವೇಶಿಸಿದ್ದಕ್ಕೆ ಲೋಕೇಶ್, ಯುವತಿಯಿಂದ ದೂರವಾಗಿದ್ದಾನೆ ಎನ್ನಲಾಗಿದೆ.

- Advertisement -


ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದ ಲೋಕೇಶ್ ನಂತರ ಬೆಂಗಳೂರಿಗೆ ಉದ್ಯೋಗಕ್ಕಾಗಿ ಹೋದ ಮೇಲೆ ಮೋಸ ಮಾಡಿದ್ದು ನ್ಯಾಯ ಒದಗಿಸುವಂತೆ ಮೃತ ಯುವತಿಯ ಮನೆಯವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರು ಕೊಟ್ಟ ನಂತರ ಲೋಕೇಶ್ ತನ್ನ ಪ್ರಿಯತಮೆಯ ಮನೆಗೆ ಬಂದು ಗಲಾಟೆ ಮಾಡಿದ್ದು ಇದರಿಂದ ನೊಂದ ಅಕೆ ಆತ್ಮಹತ್ಯೆಗೆ ಶರಣಾಗಿದ್ದಳು.


ಮನೆಯವರು ಆಕೆಯ ಅಂತ್ಯಕ್ರಿಯೆ ನೆರವೇರಿಸಿ 11 ದಿನಗಳ ಕಾರ್ಯ ಮಾಡಿದ ನಂತರ ಮನೆ ಸ್ವಚ್ಛ ಮಾಡುವಾಗ ಆಕೆ ಬರೆದ ಡೆತ್ ನೋಟ್ ದೊರಕಿತ್ತು. ಲೋಕೇಶ್ ವಂಚಿಸಿದ್ದು, ಸುರೇಶ್ ಹೆದರಿಸಿದ ವಿಚಾರವನ್ನು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಳು. ತನ್ನ ಸಾವಿಗೆ ಲೋಕೇಶ್ ಕಾರಣವೆಂದು ಡೆತ್ ನೋಟ್ನಲ್ಲಿ ಬರೆದಿರುವ ಯುವತಿಯು ಲೋಕೇಶ್ಗೆ ಜೈಲು ಶಿಕ್ಷೆ ನೀಡಬೇಕು,ಆತನನ್ನು ಗಲ್ಲಿಗೆ ಏರಿಸಬೇಕೆಂದು ಮನವಿ ಮಾಡಿದ್ದಳು.



Join Whatsapp