ಬೆಂಗಳೂರು: ಶಾರುಖ್ ಖಾನ್ ಅವರು ತಾವು ಕೆಲಸ ಮಾಡಿದ ಅತ್ಯುತ್ತಮ ಫ್ರ್ಯಾಂಚೈಸಿ ಮಾಲೀಕ ಎಂದು ಕ್ರಿಕೆಟ್ ತಾರೆ ಗೌತಮ್ ಗಂಭೀರ್ ಹೇಳಿದ್ದಾರೆ.
ನಾನು ಶಾರುಖ್ ಖಾನ್ ಅವರೊಂದಿಗೆ ಅದ್ಭುತ ಸಂಬಂಧ ಹೊಂದಿದ್ದೇನೆ. ಅವರು ನಾನು ಕೆಲಸ ಮಾಡಿದ ಅತ್ಯುತ್ತಮ ಮಾಲೀಕರು. ಅವರು ವಿನಮ್ರರು ಮಾತ್ರವಲ್ಲ, ಅವರು ಸಾಕಷ್ಟು ಗೌರವ ಹೊಂದಿರುವವರು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಅವರು ಎಂದಿಗೂ ಕ್ರಿಕೆಟ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿಲ್ಲ. ನನ್ನಂತಹ ವ್ಯಕ್ತಿಗೆ ಇದು ಬಹಳ ದೊಡ್ಡ ವಿಷಯ. ಏಕೆಂದರೆ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ಪಡೆಯುವುದು ದೊಡ್ಡ ವಿಷಯ. ನಾನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅವರು ನನ್ನನ್ನು ಬೆಂಬಲಿಸುತ್ತಾರೆ ಎಂದು ನನಗೆ ತಿಳಿದಿದೆ ಎಂಬುದಾಗಿ ಗಂಭೀರ್ ಹೇಳಿದ್ದಾರೆ.
ಐಪಿಎಲ್ 2024ರ (IPL 2024) ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರು ಕೆಎಲ್ ರಾಹುಲ್ಗೆ ಮೈದಾನದಲ್ಲಿಯೇ ನಿಂದಿಸಿರುವ ವಿಚಾರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಆರಂಭದಲ್ಲಿ ನೆಟ್ಟಿಗರು ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಅವರನ್ನು ತರಾಟೆಗೆ ತೆಗೆದುಕೊಂಡರೆ ಇದೀಗ ಹಿರಿಯ ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ಮಾಜಿ ನಾಯಕ ಗೌತಮ್ ಗಂಭೀರ್, ಶಾರುಖ್ ಎಂದಿಗೂ ಕ್ರಿಕೆಟ್ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಮತ್ತು ಯಾವುದೇ ನಿರ್ಧಾರ ತೆಗೆದುಕೊಳ್ಳಲು ಬೆಂಬಲವನ್ನು ನೀಡುತ್ತಾರೆ ಎಂದು ಒತ್ತಿ ಹೇಳಿದ್ದಾರೆ.
ಶಾರೂಕ್ ಖಾನ್ ಅವರನ್ನು ಹೊಗಳುವ ಮೂಲಕ ಗೌತಮ್ ಗಂಭೀರ್ ಪರೋಕ್ಷವಾಗಿ ಗೋಯೆಂಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ವಾರದ ಆರಂಭದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್ಎಸ್ಜಿ 10 ವಿಕೆಟ್ಗಳ ಭಾರಿ ಸೋಲಿನ ನಂತರ ರಾಹುಲ್ ಅವರೊಂದಿಗಿನ ಸಂಭಾಷಣೆ ನಡೆಸಿದ್ದ ಗೋಯೆಂಕಾ ಹಲವರ ಹುಬ್ಬೇರುವಂತೆ ಮಾಡಿದ್ದರು. ಎಸ್ಆರ್ಹೆಚ್ ಕೇವಲ 9.4 ಓವರ್ಗಳಲ್ಲಿ 166 ರನ್ಗಳನ್ನು ಬೆನ್ನಟ್ಟಿ ಎಲ್ಎಸ್ಜಿಯ ಪ್ಲೇಆಫ್ ಭರವಸೆಗಳಿಗೆ ಭಾರಿ ಹೊಡೆತ ನೀಡಿದ ನಂತರ, ಗೋಯೆಂಕಾ ಮೈದಾನದಲ್ಲಿ ರಾಹುಲ್ ಮತ್ತು ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಅವರನ್ನು ಬೈದಿದ್ದಾರೆ.