ಶಿವಮೊಗ್ಗ : ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಇಂದು ಜಿಲ್ಲೆಯ ಸಾಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ಪುಸ್ತಕಗಳ ಹೊರೆ ಇಳಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೂಚನೆ ಮೇರೆಗೆ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಾಗಿದೆ. ಪೂರಕ ಪುಸ್ತಕಗಳನ್ನು ಈಗಾಗಲೇ ವಿದ್ಯಾರ್ಥಿಗಳಿಗೆ ತಲುಪಿಸಲಾಗಿದೆ ಎಂದರು.
ಶಿಕ್ಷಕರ ಸಮಾಲೋಚನೆ (ಕೌನ್ಸಲಿಂಗ್) ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದ ಅನೇಕ ಕಡೆಗಳಲ್ಲಿ ಶಾಲಾ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಲಾಗಿದ್ದು, ಒಂದರಿಂದ ಎಂಟನೇ ತರಗತಿವರೆಗೆ ಇದ್ದ ಮೊಟ್ಟೆ ವಿತರಣೆಯನ್ನು 10ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ. ಪ್ರಸ್ತುತ ವಾರಕ್ಕೆ ಎರಡು ಮೊಟ್ಟೆಗಳು ವಿತರಣೆಯಂತೆ 84 ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆ ಅಡಿ ಹೆಚ್ಚುವರಿ ಐದು ಕೆಜಿ ಅಕ್ಕಿಗೆ ಹಣ ವಿತರಣೆ ವಿಷಯದಲ್ಲಿ ಸಮಸ್ಯೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಲವು ಫಲಾನುಭವಿಗಳ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಗಳಲ್ಲಿನ ಹೆಸರಿನ ವ್ಯತ್ಯಾಸ ಬಗ್ಗೆ ಕ್ರಮ ವಹಿಸಿ ಹಣ ತಲುಪಿಸಲಾಗುವುದು. ಕೇಂದ್ರ ಸರ್ಕಾರದವರು ಅಕ್ಕಿಯನ್ನು ನೀಡಿದ್ದರೆ, ಈ ರೀತಿಯ ಸಮಸ್ಯೆಯ ಪ್ರಶ್ನೆ ಇರುತ್ತಿರಲಿಲ್ಲ. ಕೇಂದ್ರದವರು ಅಕ್ಕಿ ನೀಡದಿದ್ದ ಹಿನ್ನೆಲೆಯಲ್ಲಿ ಹಣ ಕೊಡುವ ಸಮಸ್ಯೆ ಉದ್ಭವಿಸಿದೆ. ಇದು ತಾತ್ಕಾಲಿಕವಾಗಿದ್ದು, ಶೀಘ್ರವೇ ಪರಿಹಾರ ಆಗಲಿದೆ ಎಂದರು.
ಶಾಲೆಗಳಲ್ಲಿ ಬಿಸಿ ಊಟ ತಯಾರಿಸುವಾಗ ಮಹಿಳೆಯರು ಬಳೆ ತೆಗೆಯಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಈ ಆದೇಶ ಮಾಡಿರಬಹುದು. ಮಕ್ಕಳಿಗೆ ಅಡುಗೆ ಮಾಡುವಾಗ ಅಡುಗೆಯಲ್ಲಿ ಗಾಜಿನ ಚೂರುಗಳು ಬೀಳಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿರಬಹುದು. ಈ ವಿಷಯದಲ್ಲಿ ಧಾರ್ಮಿಕ ವಿಚಾರವನ್ನು ಅಡ್ಡ ತರುವುದು ಬೇಡ. ಗ್ಲೌಸ್ ಹಾಗೂ ತಲೆಗೆ ಕ್ಯಾಪ್ ಹಾಕಿಕೊಂಡು ಅಡುಗೆ ಮಾಡುವಂತೆ ಈಗಾಗಲೇ ತಿಳಿಸಲಾಗಿದೆ. ಅಡುಗೆ ಮಾಡುವ ವೇಳೆ ಬಳೆಗಳನ್ನು ತೆಗೆದು ಅಡುಗೆ ಮಾಡಿ ಎಂದು ಹೇಳಿರಬೇಕು. ಈಗಾಗಲೇ ಎರಡು ಪ್ರಕರಣಗಳಲ್ಲಿ ಬಿಸಿಯೂಟದಲ್ಲಿ ಹಲ್ಲಿ ಬಿದ್ದು ಮಕ್ಕಳು ಅಸ್ವಸ್ಥಗೊಂಡಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಈ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಈ ವಿಷಯದಲ್ಲಿ ಧಾರ್ಮಿಕ ವಿಚಾರವನ್ನು ತರುವುದು ಬೇಡ. ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡೋಣ ಎಂದರು.
ಶರಾವತಿ ನದಿ ಮುಳುಗಡೆ ಸಂತ್ರಸ್ತರ ಭೂಮಿ ಹಕ್ಕು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಅರಣ್ಯ ಸಚಿವರು, ಕಂದಾಯ ಸಚಿವರು ಎಲ್ಲರ ಸಭೆ ಕರೆಯಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಎರಡೂವರೆ ವರ್ಷಕ್ಕೆ ಸಿಎಂ ಬದಲಾವಣೆ ವಿಚಾರದ ಬಗ್ಗೆ ಆರ್ ವಿ ದೇಶಪಾಂಡೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಅಗತ್ಯತೆಯು ನನಗಿಲ್ಲ. ಆರ್. ವಿ ದೇಶಪಾಂಡೆಯವರು ಹೇಳಿಕೆ ನೀಡಿದ್ದರೆ ನೀವು ಅವರ ಬಳಿಯೇ ಕೇಳಿ ಎಂದರು.