ಹಿರಿಯ ನಟಿ ಜಯಂತಿ ಇನ್ನಿಲ್ಲ

Prasthutha|

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅನಾರೋಗ್ಯದ ಕಾರಣದಿಂದ ಇಂದು ನಿಧನರಾಗಿದ್ದಾರೆ. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.

- Advertisement -


7 ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ಅವರು, 1968 ರಲ್ಲಿ ಜೇನುಗೂಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಡಾ. ರಾಜ್ ಕುಮಾರ್ ಸೇರಿದಂತೆ ಹಲವು ನಟರೊಂದಿಗೆ ಅಭಿನಯಿಸಿದ್ದಾರೆ. ಕನ್ನಡವಷ್ಟೆ ಅಲ್ಲದೆ ಇತರ 6 ಭಾಷೆಗಳಲ್ಲಿ ನಟಿಸಿದ್ದಾರೆ.
1950ರಲ್ಲಿ ಬಳ್ಳಾರಿಯಲ್ಲಿ ಜನಿಸಿದ್ದ ಜಯಂತಿಯವರ ಮೂಲ ಹೆಸರು ಕಮಲಾ ಕುಮಾರಿ. ಚಲನಚಿತ್ರಕ್ಕೆ ಸೇರಿದ ಮೇಲೆ ಜಯಂತಿ ಎಂದು ಹೆಸರಿನಿಂದಲೇ ಖ್ಯಾತರಾದರು. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೆ, ತಾಯಿ ಸಂತಾನಲಕ್ಷ್ಮಿ ಗೃಹಿಣಿ.

ಅಂಬರೀಶ್, ಉದಯ ಕುಮಾರ್, ಕಲ್ಯಾಣ್ ಕುಮಾರ್, ಶ್ರೀನಾಥ್, ಅನಂತ್ ನಾಗ್ ಸೇರಿದಂತೆ ಹಲವು ಖ್ಯಾತ ನಟರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಜೇನುಗೂಡು, ಬೆಟ್ಟದ ಹುಲಿ, ಎಡಗಲ್ಲು ಗುಡ್ಡದ ಮೇಲೆ, ಮಸಣದ ಹೂವು ಸೇರಿದಂತೆ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಜಯಂತಿ ನಟಿಸಿದ್ದಾರೆ.

- Advertisement -


ಗಣ್ಯರ ಸಂತಾಪ
ಹಿರಿಯ ಕಲಾವಿದೆ, ಅಭಿನಯ ಶಾರದೆ ಜಯಂತಿ ಅವರ ನಿಧನದ ಸುದ್ದಿ ಅತೀವ ದುಃಖ ತಂದಿದೆ. ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರವಾಗಿದ್ದು, ಕನ್ನಡ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ. ದೇವರು ಅವರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ತಮ್ಮ ಮನೋಜ್ಞ ನಟನೆಯಿಂದ ‘ಅಭಿನಯ ಶಾರದೆ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ನಟಿ ಜಯಂತಿ ಅವರ ನಿಧನದ ಸುದ್ದಿ ಕೇಳಿ ಬೇಸರವಾಗಿದೆ. ತಾವು ಅಭಿನಯಿಸುತ್ತಿದ್ದ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬುತ್ತಿದ್ದ ಜಯಂತಿ ಅವರು ಬೆಳ್ಳಿ ತೆರೆಯ ಸ್ವರ್ಣ ಕಮಲದಂತಿದ್ದರು ಎಂದು ಶಿವಕುಮಾರ್ ಬಣ್ಣಿಸಿದ್ದಾರೆ.
1960ರ ದಶಕದಿಂದ ಕನ್ನಡ, ತೆಲುಗು, ತಮಿಳು, ಮರಾಠಿ ಸೇರಿದಂತೆ ಹಲವು ಭಾಷೆಗಳ ಸುಮಾರು 500 ಚಿತ್ರಗಳಲ್ಲಿ ಅಭಿನಯಿಸಿದ ಜಯಂತಿ ಅವರು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಕನ್ನಡ ಚಿತ್ರರಂಗದಲ್ಲಂತೂ ತಮ್ಮದೇ ಆದ ಶೈಲಿಯಿಂದ ಬೆರಗು ಮೂಡಿಸಿದ್ದರು. ಜೇನುಗೂಡು, ಮಂತ್ರಾಲಯ ಮಹಾತ್ಮೆ, ಬಹದ್ದೂರ್ ಗಂಡು, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿನ ಅವರ ಪಾತ್ರ ಅಚ್ಚಹಸುರಾಗಿದೆ.

ಡಾ. ರಾಜಕುಮಾರ್ ಅವರಿಂದ ಹಿಡಿದು ತಮಿಳಿನ ಎಂ.ಜಿ. ರಾಮಚಂದ್ರನ್, ತೆಲುಗಿನ ಎನ್.ಟಿ. ರಾಮರಾವ್ ಸೇರಿದಂತೆ ದಕ್ಷಿಣ ಭಾರತದ ಮಹಾನ್ ನಟರಿಗೆ ನಾಯಕಿಯಾಗಿ ಮಿಂಚು ಹರಿಸಿದ್ದವರು ನಟಿ ಜಯಂತಿ ಅವರು. ತಮ್ಮ ಕಲಾ ಸೇವೆಯಿಂದ ರಾಜ್ಯ ಪ್ರಶಸ್ತಿ ಸೇರಿದಂತೆ, ಫಿಲಂ ಫೇರ್, ರಾಷ್ಟ್ರಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಯಂತಿ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಮತ್ತೊಂದು ಧ್ರುವತಾರೆ ಮರೆಯಾಗಿದೆ. ಅವರು ನಮ್ಮನ್ನು ಅಗಲಿದ್ದರೂ ಅವರ ಚಿತ್ರಗಳ ಮೂಲಕ ಸದಾ ಜೀವಂತವಾಗಿರುತ್ತಾರೆ.
ಜಯಂತಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಆ ಭಗವಂತ ನೀಡಲಿ ಎಂದು ಶಿವಕುಮಾರ್ ಅವರು ತಮ್ಮ ಸಂತಾಪ ನುಡಿಯಲ್ಲಿ ತಿಳಿಸಿದ್ದಾರೆ.

ಅಭಿನಯ ಶಾರದೆ ಜಯಂತಿ ಅವರ ನಿಧನಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.

ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ.

ಸುಬ್ರಹ್ಮಣ್ಯ ಸ್ವಾಮಿ ಹಾಗೂ ಸಂತಾನಲಕ್ಷ್ಮೀ ದಂಪತಿಯ ಹಿರಿಯ ಪುತ್ರಿ. ಗಡಿನಾಡು ಬಳ್ಳಾರಿಯಿಂದ ಬಂದು ಬೆಳ್ಳಿ ಪರದೆಯಲ್ಲಿ ಮಿಂಚಿದ್ದ 76 ವರ್ಷ ವಯಸ್ಸಿನ ಜಯಂತಿ ಕನ್ನಡ, ತಮಿಳು, ತೆಲುಗು, ಹಿಂದಿ, ಮರಾಠಿ ಮಲಯಾಳಿ ಸೇರಿದಂತೆ ಆರು ಭಾಷೆಗಳ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡ ನೆಲದ ಕಲಾವಂತಿಕೆಯನ್ನು ಬೆಳ್ಳಿಪರದೆ ಮೂಲಕವೇ ಇಡೀ ದೇಶಕ್ಕೆ ಪರಿಚಯಿಸಿದ್ದರು.

ಜೇನುಗೂಡು ಸಿನಿಮಾದ ಮೂಲಕ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ವರನಟ ರಾಜ್ ಕುಮಾರ್ ಜೊತೆ 47 ಸಿನಿಮಾಗಳಲ್ಲಿ ನಟಿಸಿ  ದಾಖಲೆಯೇ ಮಾಡಿದ್ದಾರೆ. ಡಾ.ರಾಜ್ ಅವರಂತೆ ಜಯಂತಿಯವರೂ ನನ್ನ ನೆಚ್ಚಿನ ಕಲಾವಿದರಲ್ಲಿ ಒಬ್ಬರು.

 ಮಯೂರ, ಎಡಕಲ್ಲುಗುಡ್ಡದ ಮೇಲೆ, ಮಸಣದ ಹೂವು ಸೇರಿದಂತೆ ಹಲವು ನನಗೆ ಇಷ್ಟದ ಸಿನಿಮಾಗಳು.

 ವಯೋಸಹಜ ಸಮಸ್ಯೆಗಳಿಂದ ಕಳೆದ ಒಂದು ವರ್ಷದಿಂದ ತೀವ್ರ ಅಸ್ವಸ್ಥಗೊಂಡಿದ್ದರು. ಚೇತರಿಸಿಕೊಂಡು ಇನ್ನಷ್ಟು ಕಾಲ ನಮ್ಮ ಜತೆಗಿರುತ್ತಾರೆ ಅಂದುಕೊಂಡಿದ್ದೆ. ಆದರೆ ಅವರು ನಮ್ಮನ್ನೆಲ್ಲಾ ತ್ಯಜಿಸಿರುವುದು ಬೆಳ್ಳಿ ತೆರೆಗೆ ತುಂಬಲಾರದ ನಷ್ಟ.

ಇವರ ಅಗಲಿಕೆಯನ್ನು ಸಹಿಸುವ ಶಕ್ತಿ ಅಪಾರ ಅಭಿಮಾನಿಗಳಿಗೆ, ಚಿತ್ರರಂಗಕ್ಕೆ, ಅವರ ಕುಟುಂಬಕ್ಕೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Join Whatsapp