ರಾಜಕೀಯದ ಕೊನೆಯ ಅಧ್ಯಾಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ: ಹೊಸ ಸಾರಥಿ ಮುಂದಿದೆ ಸವಾಲುಗಳ ಸರಮಾಲೆ

Prasthutha|

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಅಧ್ಯಾಯ ಕೊನೆಗೊಳ್ಳುವ ಹಂತ ತಲುಪಿದೆ. ಬೀಳ್ಕೊಡುಗೆಯ ಭಾವುಕ ಸನ್ನಿವೇಶಕ್ಕೆ ರಾಜ್ಯ ಸಾಕ್ಷಿಯಾಗುತ್ತಿದೆ. ದಕ್ಷಿಣ ಭಾರತದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿ ಕಮಲ ಅರಳಿಸಿದ ಅಗ್ರರಲ್ಲಿ ಯಡಿಯೂರಪ್ಪ ಮುಖ್ಯರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ, ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ಪ್ರಮುಖರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಇಂದಿಗೆ [ಜುಲೈ 26ಕ್ಕೆ] ಎರಡು ವರ್ಷ. ಅಧಿಕಾರದಿಂದ ಇಂದೇ ನಿರ್ಗಮಿಸಬಹುದು,. ಅಥವಾ ನೆರೆ, ಕೊರೋನಾ ಸಮಸ್ಯೆಯಿಂದಾಗಿ ಹೆಚ್ಚೆಂದರೆ ಯಡಿಯೂರಪ್ಪ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಮತ್ತೊಮ್ಮೆ ಧ್ವಜಾರೋಹಣ ನೆರವೇರಿಸಿ ನಂತರ ಪದತ್ಯಾಗ ಮಾಡಬಹುದು. ಏನೇ ಆದರೂ ಯಡಿಯೂರಪ್ಪ ನಿರ್ಗಮನ ಬಹುತೇಕ ಖಚಿತವಾಗಿದೆ. ವರಿಷ್ಠರ ಸಂದೇಶಕ್ಕಾಗಿ ಮುಖ್ಯಮಂತ್ರಿ ಕಾದು ಕುಳಿತಿದ್ದಾರೆ. ಯಾವುದೇ ಸರ್ಕಾರ ಎದುರಿಸದಷ್ಟು ಸಂಕಷ್ಟಗಳನ್ನು, ಯಾವುದೇ ಮುಖ್ಯಮಂತ್ರಿ ಎದುರಿಸದಷ್ಟು ಭ್ರಷ್ಟಾಚಾರ, ಕುಟುಂಬದ ಹಸ್ತಕ್ಷೇಪ, ಸ್ವಜನ ಪಕ್ಷಪಾತದ ಆರೋಪಗಳನ್ನು ಯಡಿಯೂರಪ್ಪ ಎದುರಿಸಿದ್ದಾರೆ. ಆಪರೇಷನ್ ಕಮಲ ಕಾರ್ಯಾಚರಣೆ ಮೂಲಕ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರಿಗೆ ಅಧಿಕಾರ ಹೂವಿನ ಹಾಸಿಗೆಯಾಗಿರಲಿಲ್ಲ. ಕೋವಿಡ್ ಸಾಂಕ್ರಾಮಿಕ, ಪ್ರವಾಹ ಮತ್ತಿತರ ಸವಾಲುಗಳ ನಡುವೆ ಯಡಿಯೂರಪ್ಪ ಕಾರ್ಯನಿರ್ವಹಿಸಿದ್ದಾರೆ. ಆದರೆ ಇದೇ ಸಂಕಷ್ಟದ ನಡುವೆ ಮುಖ್ಯಮಂತ್ರಿ ಮತ್ತವರ ಕುಟುಂಬದ ಭ್ರಷ್ಟಾಚಾರ ಆರೋಪಗಳು ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿವೆ.

- Advertisement -


ಮೊದಲ ವರ್ಷದ ಆರಂಭದಲ್ಲಿ ಪ್ರವಾಹ ಪರಿಸ್ಥಿತಿ ಎದುರಾದಾಗ ಮುಖ್ಯಮಂತ್ರಿ ಒಬ್ಬರೇ ಸಂಪುಟದಲ್ಲಿದ್ದು, ಯಾವುದಕ್ಕೂ ಎದೆಗುಂದದೆ ಇಡೀ ರಾಜ್ಯದ ಸಮಸ್ಯೆಗಳನ್ನು ಒಬ್ಬರೇ ಎದುರಿಸಿ ಮೆಚ್ಚುಗೆಗೆ ಪಾತ್ರರಾದರು. ಆದರೆ ಎರಡು ವರ್ಷ ತುಂಬುವ ವೇಳೆಗೆ ಮುಖ್ಯಮಂತ್ರಿ ಮೇಲೆ ಆರೋಪಗಳ ಸುರಿಮಳೆ ಹರಿದಿವೆ. ಕೊರೋನಾ ಸಮಸ್ಯೆಗಳ ನಡುವೆ ಬಿಜೆಪಿಯ ಶಾಸಕರ ಒಂದು ಬಣ ನಿರಂತರವಾಗಿ ಯಡಿಯೂರಪ್ಪ ವಿರುದ್ಧ ಭ್ರಷ್ಟಚಾರ ವಿಚಾರದಲ್ಲಿ ವಾಗ್ದಾಳಿ ನಡೆಸುತ್ತಲೇ ಬಂದಿತ್ತು. ಪಕ್ಷದಲ್ಲಿ ಆಂತರಿಕವಾಗಿ ಚರ್ಚೆಯಾಗಬೇಕಾಗಿದ್ದ ವಿಷಯಗಳು ಬಹಿರಂಗವಾಗಿ ಸಂವಾದಕ್ಕೆ ನಾಂದಿಯಾಯಿತು. ಇಷ್ಟಾದರೂ ಯಾವುದೇ ಶಾಸಕರ ಮೇಲೆ ಈ ವರೆಗೆ ಕ್ರಮ ಆಗಿಲ್ಲ. ಅಂದರೆ ಈ ಎಲ್ಲಾ ಆರೋಪಗಳು ಸತ್ಯ ಎಂಬುದಕ್ಕೆ ಯಡಿಯೂರಪ್ಪ ಪದತ್ಯಾಗದ ಸುಳಿವು ಪುಷ್ಟಿ ನೀಡಿದೆ. ಬೆಂಕಿ ಇಲ್ಲದೇ ಹೊಗೆಯಾಡುವುದಿಲ್ಲ ಎನ್ನುವ ಮಾತು ಯಡಿಯೂರಪ್ಪ ವಿಚಾರದಲ್ಲಿ ಅಕ್ಷರಶಃ ಸತ್ಯವಾಗಿದೆ. ಇಷ್ಟೆಲ್ಲಾ ಆರೋಪಗಳ ನಡುವೆಯೂ ಯಡಿಯೂರಪ್ಪ ಅವರನ್ನು ಅತ್ಯಂತ ಎಚ್ಚರಿಕೆಯಿಂದ ಬೀಳ್ಕೊಡಲು ತಯಾರಿ ನಡೆದಿದೆ. 2013 ರಲ್ಲಿ ಒಮ್ಮೆ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿ ಪಾಠ ಕಲಿತಿರುವ ವರಿಷ್ಠರು ಈಗ ಮೊತ್ತೊಮ್ಮೆ ಬಂಡಾಯಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಹೀಗಾಗಿಯೇ ಯಡಿಯೂರಪ್ಪ ಅವರಿಗೆ ರಾಜ್ಯಪಾಲರ ಹುದ್ದೆಯ ಭರವಸೆ ನೀಡಲಾಗಿತ್ತು. ರಾಜಕೀಯ ಚದುರಂಗದಾಟದಲ್ಲಿ ಪಳಗಿರುವ ಯಡಿಯೂರಪ್ಪ, ತಮಗೆ ಈ ಹುದ್ದೆ ಬೇಡ ಎಂದು ಹೇಳಿದ್ದು, ಪಕ್ಷ ಸಂಘಟನೆ, ಚುನಾವಣೆಯಂತಹ ರಾಜಕಾರಣವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಜವಾಬ್ದಾರಿ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅವಧಿ ಪೂರ್ಣಗೊಳಿಸಲು ಸಾಧ್ಯವಾಗದ ಯಡಿಯೂರಪ್ಪ ಕೆಳಗಿಳಿಯುತ್ತಿದ್ದಾರೆ. ಮುಂದಿನ ಉತ್ತರಾಧಿಕಾರಿಗೆ ಈಗ ಸವಾಲುಗಳ ಸರಮಾಲೆಯೇ ಎದುರಾಗಿದೆ. ಯಾರೇ ಮುಖ್ಯಮಂತ್ರಿಯಾದರೂ ಹಿಂದೆಂದೂ ಕಂಡರಿಯದ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ. ಇದೀಗ ರಾಜ್ಯದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದ್ದು, ಸಂಪನ್ಮೂಲ ಸಂಗ್ರಹ ಹೆಚ್ಚಿಸಲು ಗಮನಹರಿಸಬೇಕಾಗಿದೆ. ಸಾಲದ ಸುಳಿಗೆ ಸಿಲುಕಿ ಹದಗೆಟ್ಟಿರುವ ರಾಜ್ಯದ ಆರ್ಥಿಕ ಆರೋಗ್ಯ ರಕ್ಷಣೆಗೆ ಗಮನಹರಿಸಬೇಕಾಗಿದೆ. ಕೋವಿಡ್ 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣೆಗೆ ಒತ್ತು ನೀಡಬೇಕಾಗಿದೆ.


ಕೋವಿಡ್ ನಿಂದ ಜರ್ಝರಿತಗಾಗಿರುವ ವಿವಿಧ ಸಮುದಾಯಗಳ ಬದುಕು ಕಟ್ಟಬೇಕಾಗಿದೆ. ಉದ್ಯೋಗ ಕಳೆದುಕೊಂಡವರಿಗೆ ಕೆಲಸ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕಾಗಿದೆ. ಪ್ರಮುಖವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಸೂಕ್ತ ವಾತಾವರಣ ನಿರ್ಮಾಣ ಮಾಡುವುದು ಮುಂದಿನ ಮುಖ್ಯಮಂತ್ರಿ ಮುಂದಿದೆ.
ಕರ್ನಾಟಕ ಶಾಂತಿಯ ತೋಟ, ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿರುವ ಕಾರಣ ಎಲ್ಲಾ ವಲಯಗಳಲ್ಲೂ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ. ಇಲ್ಲಿನ ಭೌಗೋಳಿಕ ವೈವಿಧ್ಯತೆ, ನೈಸರ್ಗಿಕ ಸಂಪನ್ಮೂಲ, ಸಂಶೋಧನೆ, ನಾವೀನ್ಯತೆ ಖ್ಯಾತಿ ಪಡೆದಿದೆ. ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಸಾಕಷ್ಟು ಕೈಗಾರಿಕೆಗಳು ಮತ್ತೆ ತನ್ನ ಚಟುವಟಿಕೆಗಳನ್ನು ಆರಂಭಿಸಿಲ್ಲ. ಎರಡನೇ ಅಲೆ ನಂತರ ಈ ವಲಯ ಮತ್ತಷ್ಟು ಶೋಚನೀಯವಾಗಿದೆ. ನಿರುದ್ಯೋಗ ಸಮಸ್ಯೆ ದಿನದಿಂದ ಹೆಚ್ಚಾಗುತ್ತಲೇ ಇದೆ. ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರ ರಕ್ಷಣೆ, ಕೃಷಿ, ತೋಟಗಾರಿಕೆ ಬೆಳೆಗಾರರು, ಪಶು ಸಂಗೋಪನೆ ಕ್ಷೇತ್ರವನ್ನು ಬಲಪಡಿಸಿ ಈ ವಲಯಗಳನ್ನು ಸ್ವಾವಲಂಬಿ ಮಾಡುವ ಜವಾಬ್ದಾರಿ ಮುಂದಿನ ಮುಖ್ಯಮಂತ್ರಿ ಹೆಗಲೇರಲಿದೆ, ಕೋವಿಡ್ ಕಾರಣದಿಂದ ಪ್ರಸಕ್ತ ಸಾಲಿನ ಬಜೆಟ್ ಕಾರ್ಯಕ್ರಮಗಳು ನನೆಗುದಿಗೆ ಬಿದ್ದಿದ್ದು, ಇವುಗಳ ಅನುಷ್ಠಾನಕ್ಕೆ ವಿಶೇಷ ಗಮನಹರಿಸಬೇಕಾಗಿದೆ. ರಾಜಸ್ವ ಕ್ರೋಢೀಕರಣಕ್ಕಾಗಿ ಇಡೀ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಹೇರಿರುವ ಹೆಚ್ಚಿನ ತೆರಿಗೆಯನ್ನು ತಗ್ಗಿಸಬೇಕಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಪ್ರತಿವರ್ಷ ಅನುದಾನ ಕಡಿತ ಮಾಡುತ್ತಿದ್ದು, ಇದು ಆಘಾತಕಾರಿ ಬೆಳವಣಿಗೆಯಾಗಿದೆ. ಆರ್ಥಿಕ ಹಿಂಜರಿತ, ಸಾಲದ ಹೊರೆ ಹಾಗೂ ಸಂಪನ್ಮೂಲ ಸಂಗ್ರಹದಿಂದ ಆಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.

- Advertisement -


ಬೊಕ್ಕಸದಲ್ಲಿನ ಸಂಪನ್ಮೂಲ ಕೊರತೆ ನೀಗಿಸಲು ಕಳೆದ ಬಜೆಟ್ ನಲ್ಲಿ 71,332 ಕೋಟಿ ಮೊತ್ತದ ಸಾಲ ಪಡೆಯುತ್ತಿರುವುದು ಸಹ ರಾಜ್ಯದ ಆರ್ಥಿಕ ಪರಿಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳನ್ನು ಹೆಚ್ಚಿಸಿದೆ. 2022ರ ಮಾರ್ಚ್ ಅಂತ್ಯಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದ ಕೊನೆಗೆ ರಾಜ್ಯದ ಒಟ್ಟು ಸಾಲದ ಮೊತ್ತ 4.57 ಲಕ್ಷ ಕೋಟಿ ರೂ ಮೀರಲಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಎಸ್ ಜಿ ಎಸ್ಟಿ ) ಶೇ 26.9 ರಷ್ಟಾಗಲಿದೆ. ಜತೆಗೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವರಮಾನ ಕೊರತೆ ಹೊಂದಿದ ಬಜೆಟ್ ಅನ್ನು ಯಡಿಯೂರಪ್ಪ ಮಂಡಿಸಿದ್ದು, ಇದು ನಿಶ್ಚಿತವಾಗಿಯೂ ಆರ್ಥಿಕ ಶಿಸ್ತಿಗೆ ಧಕ್ಕೆ ಬರಲಿದೆ ಎನ್ನುವ ಕಳವಳ ಆರ್ಥಿಕ ತಜ್ಞರನ್ನು ಕಾಡುತ್ತಿದೆ. ರಾಜ್ಯದ ವರಮಾನ ಕೊರತೆಯು ಅಂದಾಜು ರೂ 15,134 ಕೋಟಿ ಇರಲಿದೆ. ವಿತ್ತೀಯ ಕೊರತೆಯು 59,240 ಕೋಟಿ ರೂ ಗಳಷ್ಟಾಗಲಿದೆ. ಇದು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಎಸ್ಜಿಡಿಪಿ) ಶೇ 3.48ರಷ್ಟು ಇರಲಿದೆ. ಇದೆಲ್ಲವೂ ವಿತ್ತೀಯ ಹೊಣೆಗಾರಿಕೆ ಮೇಲೆ ಭಾರೀ ಪ್ರಮಾಣದಲ್ಲಿ ಹೊಡೆತ ನೀಡುವ ಸಾಧ್ಯತೆಗಳಿವೆ.
ಈ ರೀತಿಯ ಆರ್ಥಿಕ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಕೂಡ ಸಾಕಷ್ಟು ಕೊಡುಗೆ ನೀಡಿದೆ. ರಾಜ್ಯಕ್ಕೆ ಜಿ.ಎಸ್.ಟಿ ಪರಿಹಾರ ಸೇರಿದಂತೆ ನ್ಯಾಯಬದ್ಧವಾಗಿ ಬರಬೇಕಾಗಿರುವ ಅನುದಾನವನ್ನು ಬಿಡುಗಡೆ ಮಾಡಿಲ್ಲ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ರಿಂದಲೂ ರಾಜ್ಯಕ್ಕೆ ನ್ಯಾಯ ದೊರೆತಿಲ್ಲ.


ರಾಜ್ಯದಿಂದ 25 ಮಂದಿ ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದು ರಾಜ್ಯಕ್ಕೆ ಹೆಚ್ಚಿನ ಅನುಕೂಲವಾಗಿಲ್ಲ. ರಾಜ್ಯದ ವಿಚಾರಗಳ ಬಗ್ಗೆ ಧ್ವನಿ ಎತ್ತುವ ಕೆಲಸ ಮಾಡಿಲ್ಲ. ಯಡಿಯೂರಪ್ಪ ಅವರು ಸಹ ಸಂಸದರು, ಕೇಂದ್ರ ಸಚಿವರನ್ನು ಕಟ್ಟಿಕೊಂಡು ಕೇಂದ್ರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ. ಮುಂದಿನ ಮುಖ್ಯಮಂತ್ರಿ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಬೇಕಾಗಿದೆ.
ನರೇಂದ್ರ ಮೋದಿ ಅವರ ಸಹಕಾರ, ಸಹಾಯ, ಬೆಂಬಲ ಹಾಗೂ ಪ್ರೋತ್ಸಾಹ ಎಂದಿನಂತೆ ಮುಂದುವರೆದಿದೆ ಎಂದು ಯಡಿಯೂರಪ್ಪ ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಆದರೆ ರಾಜ್ಯಕ್ಕೆ ಮಾತ್ರ ಹೆಚ್ಚಿನ ನ್ಯಾಯ ದೊರಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮುಂದಿನ ಮುಖ್ಯಮಂತ್ರಿ ಸ್ವಾವಲಂಬಿ ಕರ್ನಾಟಕ ನಿರ್ಮಾಣ ಮಾಡಬೇಕಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ ಸೇರಿದಂತೆ ಹಲವು ಸಂಕಷ್ಟಗಳನ್ನು ನಿವಾರಿಸಿ ಕರ್ನಾಟಕವನ್ನು ಪುನರ್ ನಿರ್ಮಾಣ ಮಾಡುವ ಬಹುದೊಡ್ಡ ಜವಾಬ್ದಾರಿ ಮುಂದಿನ ಸಾರಥಿ ಮೇಲಿದೆ.

Join Whatsapp