ರಾಂಚಿ: ಭಾರತ-ನ್ಯೂಜಿಲೆಂಡ್ ನಡುವಿನ ಮೂರು T-20 ಪಂದ್ಯಗಳ ಸರಣಿಯ ಎರಡನೇ ಪಂದ್ಯ ಶುಕ್ರವಾರ ರಾಂಚಿಯಲ್ಲಿ ನಡೆಯಲಿದೆ. ಜೈಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಜಯಗಳಿಸಿರುವ ರೋಹಿತ್ ಪಡೆ ಶುಕ್ರವಾರದ ಪಂದ್ಯವನ್ನು ಗೆಲ್ಲುವುದರ ಮೂಲಕ ಸರಣಿ ಕೈವಶಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.
ICC-T20 ವಿಶ್ವಕಪ್ ಟೂರ್ನಿಯ ಫೈನಲ್’ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಶರಣಾಗಿದ್ದ ನ್ಯೂಜಿಲೆಂಡ್ ತಂಡಕ್ಕೆ ಶುಕ್ರವಾರದ ಪಂದ್ಯ ಅಳಿವು-ಉಳಿವಿನ ಪಂದ್ಯವಾಗಿ ಮಾರ್ಪಟ್ಟಿದೆ. ರಾಂಚಿಯಲ್ಲಿ ಕಿಬೀಸ್ ಗೆದ್ದರೆ ಮೂರನೇ ಪಂದ್ಯ ಫೈನಲ್ ಆಗಿ ಪರಿಣಮಿಸಲಿದೆ.
ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ರಾಂಚಿ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಆಡಿದ ತಂಡವನ್ನೇ ಬಹುತೇಕ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆರಂಭಿಕರಾಗಿ ರೋಹಿತ್ ಹಾಗೂ ರಾಹುಲ್ ಅತ್ಯುತ್ತಮ ಫಾರ್ಮ್’ನಲ್ಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶದಲ್ಲಿ ಸೂರ್ಯಕುಮಾರ್ ಯಾದವ್ ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ದರು. ಆದರೆ ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ವೈಫಲ್ಯ ಅನುಭವಿಸಿದ್ದು, ಇಂದಿನ ಪಂದ್ಯದಲ್ಲಿ ಬದಲಿ ಆಟಗಾರರು ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ರಾಂಚಿಯ ಮೈದಾನದಲ್ಲಿ 4 ವರ್ಷಗಳ ಬಳಿಕ ಅಂತರಾಷ್ಟ್ರೀಯ T-20ಪಂದ್ಯ ನಡೆಯುತ್ತಿದೆ. ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಟಾಸ್ ಗೆಲ್ಲುವ ತಂಡ ಬೌಲಿಂಗ್ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಎರಡನೇ ಇನ್ನಿಂಗ್ಸ್’ನಲ್ಲಿ ಮಂಜು ವಿಲನ್ ಆಗಿ ಕಾಡುವುದು ನಿಶ್ಚಿತ. ಹೀಗಾಗಿ ಮೊದಲು ಬ್ಯಾಟ್ ಮಾಡಿದ ತಂಡ ದೊಡ್ಡ ಮೊತ್ತವನ್ನೇ ಕಲೆಹಾಕಬೇಕಾಗುತ್ತದೆ.