ಐಸಿಸಿ T-20 ವಿಶ್ವಕಪ್ ಸೆಮಿಫೈನಲ್: ಪಾಕ್ ಅಜೇಯ ಓಟಕ್ಕೆ ಬೀಳುತ್ತಾ ಬ್ರೇಕ್ ?

Prasthutha|

ದುಬೈ: ಐಸಿಸಿ ಟಿ-20 ವಿಶ್ವಕಪ್’ನ ಸೂಪರ್-12 ಹಂತದಲ್ಲಿ ಎಲ್ಲಾ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿರುವ ಪಾಕಿಸ್ತಾನ, ಗುರುವಾರ ಮಹತ್ವದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಕಳೆದ ಟಿ-20 ವಿಶ್ವಕಪ್’ನಲ್ಲಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದ್ದ ಪಾಕಿಸ್ತಾನ, ಯುಎಇಯಲ್ಲಿ ಭರ್ಜರಿ ಕಮ್’ಬ್ಯಾಕ್ ಮಾಡಿದ್ದು, ಗ್ರೂಪ್-2ರಲ್ಲಿ ಅಗ್ರಸ್ಥಾನಿಯಾಗಿ ಉಪಾಂತ್ಯ ಪ್ರವೇಶಿಸಿದೆ.

- Advertisement -

5 ಬಾರಿ ಏಕದಿನ ವಿಶ್ವ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ, ಟಿ-20 ವಿಶ್ವಕಪ್’ನ 6 ಆವೃತ್ತಿ ಕಳೆದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗಿಲ್ಲ. ಮತ್ತೊಂದೆಡೆ 2009ರಲ್ಲಿ ಟಿ-20 ವಿಶ್ವಕಪ್ ಚಾಂಪಿಯನ್ ಆಗಿದ್ದ ಪಾಕಿಸ್ತಾನ ಮತ್ತೊಮ್ಮೆ ಚುಟುಕು ಕ್ರಿಕೆಟ್’ನಲ್ಲಿ ತನ್ನ ಅಧಿಪಾತ್ಯ ಸ್ಥಾಪನೆಗೆ ತಯಾರಿ ನಡೆಸಿದೆ.

1996 ವಿಶ್ವಕಪ್ ಫೈನಲ್, 2010ರ ವಿಶ್ವಕಪ್ ಸೆಮಿಫೈನಲ್ ಹಾಗೂ 2015ರ ವಿಶ್ವಕಪ್ ಕ್ವಾರ್ಟರ್ ಪೈನಲ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನ ತಂಡವನ್ನು ಸೋಲಿಸಿದೆ. ಹೀಗಾಗಿ ಐಸಿಸಿ ಟೂರ್ನಿಗಳ ಮಹತ್ವದ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿದೆ. ಆದರೆ ಪ್ರಸಕ್ತ ಟೂರ್ನಿಯ ಸೆಮಿಫೈನಲ್’ನಲ್ಲಿ ಹಿಂದಿನ ಎಲ್ಲಾ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ ಪಾಕ್ ತಂಡ.

- Advertisement -

ಸೂಪರ್-12 ಹಂತದಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ ರನ್ ರೇಟ್ ಆಧಾರದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಂದಿಕ್ಕಿ ಆಸ್ಟ್ರೇಲಿಯಾ ಸೆಮಿಫೈನಲ್ ಪ್ರವೇಶಿಸಿದೆ. ಆದರೆ ಆಡಿದ ಎಲ್ಲಾ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿ ಅಜೇಯನಾಗಿ ಪಾಕಿಸ್ತಾನ ಸೆಮಿ ಹೋರಾಟಕ್ಕೆ ಇಳಿಯಲಿದೆ.

Join Whatsapp