ದುಡಿಯುವ ಕೈಗಳಿಗೆ ಕೈಗೆಟುಕದ ಜನತಾ ಪ್ಯಾಕೇಜ್ : SDTU ಟೀಕೆ

Prasthutha|

ಬೆಂಗಳೂರು : ಬಹಳ ದಿನಗಳಿಂದ ದುಡಿಯುವ ಕೈಗಳು ನಿರೀಕ್ಷಿಸುತ್ತಿದ್ದ ಲಾಕ್ಡೌನ್ ಪರಿಹಾರ ಕಾರ್ಮಿಕರನ್ನು ನಿರಾಸೆ ಗೊಳಿಸಿದೆ.ಸರಕಾರ ಘೋಷಿಸಿದ ವಿಶೇಷ ಪ್ಯಾಕೇಜ್ ನಲ್ಲಿ ಯಾವುದೇ ಸಮರ್ಪಕವಾದ ದೂರ ದೃಷ್ಟಿ ಇಲ್ಲ, ಇದೊಂದು ಅವೈಜ್ಞಾನಿಕ ಪ್ಯಾಕೇಜ್  ಎಂದು ರಾಜ್ಯಾಧ್ಯಕ್ಷ ರಹೀಮ್ ಪಟೇಲ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಫಯಾಜ್ ದೊಡ್ಡ ಮನೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇತ್ತೀಚೆಗೆ ಶ್ರಮಿಕ ವರ್ಗದ ಒತ್ತಡಗಳು, ಆಗ್ರಹಗಳು ಹೆಚ್ಚಾದಂತೆ ಸರಕಾರ ಕಣ್ಣೊರೆಸುವ ತಂತ್ರ ನಡೆಸಿರುವುದು ಸರಿಯಲ್ಲ, ಆರ್ಥಿಕವಾಗಿ ದುರ್ಬಲಗೊಂಡ ಎಲ್ಲರಿಗೂ ಪರಿಹಾರ ಸಿಗುವಂತೆ ಸರಳ ನಿಯಮಗಳೊಂದಿಗೆ ಪರಿಹಾರ ಘೋಷಿಸಬೇಕಿತ್ತು. ಕಳೆದ ವರ್ಷದ ಲಾಕ್ಡೌನ್  ಸಂದರ್ಭದಲ್ಲಿ ಬಿಡುಗಡೆಯಾದ ಪರಿಹಾರ ಇದುವರೆಗೂ ಬಹುತೇಕ  ಕಾರ್ಮಿಕರಿಗೆ ಇನ್ನೂ ಸಮರ್ಪಕವಾಗಿ ತಲುಪಿಲ್ಲ, ಅದೇ ಅರ್ಜಿಯನ್ನು ಪರಿಗಣಿಸಿ ಸರಕಾರ ಪರಹಾರವನ್ನು ತಕ್ಷಣವೇ ವಿತರಿಸಿ, ಪರಿಹಾರ ತಲುಪದೇ ಇರುವ ಕಾರ್ಮಿಕರಿಗೆ ಸುಲಭ ವಿಧಾನದ ಮೂಲಕ ಹೊಸ ಅರ್ಜಿಯನ್ನು ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.   

- Advertisement -

ಕಳೆದ ಅವಧಿಯಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೊಳಗಾದ  ದುಡಿಯುವ ವರ್ಗ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದೇ  ಅರ್ಜಿಯನ್ನು ಪರಿಗಣಿಸಿ ಪರಿಹಾರ ಧನ ನೀಡಬೇಕು. ಹೊಸ ಅರ್ಜಿ ಸಲ್ಲಿಸಲು ಬರುವ ಫಲಾನುಭವಿಗಳಿಗೆ  ದಾಖಲೆಗಳನ್ನು ಪೂರೈಸಲು ಸೂಕ್ತ ಸೌಲಭ್ಯ ಕಲ್ಪಿಸಬೇಕು.  ಅಥವಾ ಆನ್ಲೈನ್ ಮೂಲಕ ಅರ್ಜಿ ಪಡೆದು ತ್ವರಿತ ವಿಲೇವಾರಿಗೆ ಅವಕಾಶ ಮಾಡಿಕೊಡಬೇಕು. ಮತ್ತು ಗ್ರಾಮಾಂತರ ಕಾರ್ಮಿಕರಿಗೆ ಗ್ರಾಮಪಂಚಾಯತ್ ಮೂಲಕ ಪರಿಹಾರ ವಿತರಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಘೋಷಿತ ಪರಿಹಾರ ಧನ  ಶೀಘ್ರ ಅನುಷ್ಠಾನಗೊಳ್ಳುವಂತೆ ಮಾಡಿ,ಬಡ ಕಾರ್ಮಿಕರಿಗೆ ಪರಿಹಾರ ಪಡೆಯಲು ಮಾಹಿತಿ ನೀಡುವುದಕ್ಕಾಗಿ ವ್ಯವಸ್ಥೆಗಳನ್ನು ಮಾಡಬೇಕು. ಕಳೆದ ಬಾರಿ ಅರ್ಜಿ ಹಾಕಿ ಪರಿಹಾರ ಧನ ತಲುಪದ ಫಲಾನುಭವಿಗಳಿಗೆ ಬಾಕಿ ಪರಿಹಾರ ಧನದ  ಜೊತೆಗೆ ಈ ಪರಿಹಾರ ಧನವನ್ನೂ ಸೇರಿಸಿ ನೀಡಬೇಕು. ಲಾಕ್ಡೌನ್  ಮುಂದುವರಿದರೆ ಪರಿಹಾರ ಧನವನ್ನು ಪರಿಷ್ಕರಿಸಿ ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

- Advertisement -