ಬುದ್ಧಿಜೀವಿಗಳ ವಿರುದ್ಧ ಯುಎಪಿಎ ವ್ಯಾಪಕ ದುರ್ಬಳಕೆ: ಏಳು ವರ್ಷಗಳ ಹಿಂದೆ ಎಚ್ಚರಿಸಿದ್ದ ಎಸ್.ಡಿ.ಪಿ.ಐ

Prasthutha|

ಭೀಮಾ ಕೋರೆಗಾಂವ್ ಗಲಭೆಯ ತನಿಖೆ ನಡೆಸುತ್ತಿರುವ ಎನ್.ಐ.ಎ ನಿನ್ನೆ 82ರ ಹರೆಯದ ಮಾನವ ಹಕ್ಕು ಹೋರಾಟಗಾರ ಸ್ಟ್ಯಾನ್ ಸ್ವಾಮಿಯವರನ್ನು ಬಂಧಿಸಿದ್ದು, ದೇಶಾದ್ಯಂತ ಬುದ್ಧಿ ಜೀವಿಗಳ ಟೀಕೆಗೆ ಗುರಿಯಾಗಿದೆ.

ಪ್ರಕರಣದಲ್ಲಿ ಜಾರ್ಜ್ ಶೀಟ್ ಸಲ್ಲಿಸಿರುವ ಎನ್.ಐ.ಎ, ಸಾಮಾಜಿಕ ಹೋರಾಟಾಗಾರರಾದ ಆನಂದ್ ತೇಲ್ತುಂಬ್ಡೆ, ಗೌತಮ್ ನವ್ಲಖಾ, ದಿಲ್ಲಿ ವಿವಿಯ ಸಹಾಯಕ ಪ್ರೊಫೆಸರ್ ಹನಿ ಬಾಬು, ಮಾವೋವಾದಿ ನಾಯಕ ಮಿಲಿಂದ್ ತುಂಬ್ಡೆಯನ್ನು ಆರೋಪಿಗಳಾಗಿ ಹೆಸರಿಸಿದ್ದಾರೆ. ಇವರ ವಿರುದ್ಧ ದೇಶದ್ರೋಹ, ಯು.ಎ.ಪಿ.ಎಯಂತಹ ಕರಾಳ ಕಾನೂನುಗಳನ್ನು ಹೇರಲಾಗಿದೆ.

- Advertisement -

ಇತ್ತೀಚೆಗೆ ಪೌರತ್ವ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾದ ವಿದ್ಯಾರ್ಥಿ ಹೋರಾಟಗಾರರ ವಿರುದ್ಧವೂ ಯು.ಎ.ಪಿ.ಎ ಕರಾಳ ಕಾಯ್ದೆಯನ್ನು ಬಳಸಲಾಗಿತ್ತು. ಜೆ.ಎನ್.ಯು ವಿದ್ವಾಂಸ ಉಮರ್ ಖಾಲಿದ್, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಕಾಲೇಜುಗಳ ವಿದ್ಯಾರ್ಥಿಗಳಾದ ಮೀರಾನ್ ಹೈದರ್ ಮತ್ತು ಸಫೂರ ಝರ್ಗರ್ ವಿರುದ್ಧ ಇದನ್ನು ಹೇರಲಾಗಿತ್ತು. ಇದೀಗ ದೇಶಾದ್ಯಂತ ಬುದ್ಧಿ ಜೀವಿಗಳು ಯುಎಪಿಎ ವಿರುದ್ಧ ಧ್ವನಿಯೆತ್ತಲು ಆರಂಭಿಸಿದ್ದಾರೆ.

6 ತಿಂಗಳುಗಳ ಕಾಲ ಜಾಮೀನು ನಿರಾಕರಿಸಬಹುದಾದ ಈ ಕಾಯ್ದೆಯು ಪ್ರಭುತ್ವದ ಕೈಯಲ್ಲಿ ದುರ್ಬಳಕೆಯಾಗಲಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಿಂದಿನಿಂದಲೂ ಎಚ್ಚರಿಸುತ್ತಾ ಬಂದಿದೆ. 2013ರಲ್ಲಿ ಪಕ್ಷವು ಇದರ ವಿರುದ್ಧ ದೇಶಾದ್ಯಂತ ಅಭಿಯಾನವನ್ನೇ ನಡೆಸಿತ್ತು. ಇದರ ಪ್ರಯುಕ್ತ ಜನಜಾಗೃತಿ ಸಭೆ, ಸೆಮಿನಾರ್, ಕರಪತ್ರ ವಿತರಣೆ, ಪೋಸ್ಟರ್ ಅಭಿಯಾನಗಳನ್ನು ಪಕ್ಷದ ವತಿಯಿಂದ ನಡೆಸಲಾಗಿತ್ತು. ನಂತರವೂ ಯುಎಪಿಎ ವಿರುದ್ಧದ ತನ್ನ ಹೋರಾಟವನ್ನು ಮುಂದುವರಿಸಿತ್ತು.

ಯಾವುದೇ ವ್ಯಕ್ತಿ ಅಪರಾಧವೆಸಗಲು ಸಾಧ್ಯವಿದೆ ಎಂದು ಅನುಮಾನ ಬಂದರೆ ಅವರನ್ನು ಬಂಧಿಸುವ ಅಧಿಕಾರವನ್ನು ಯುಎಪಿಎ ನೀಡುತ್ತದೆ. ಹಾಗೆ ಬಂಧಿತರಾದವರನ್ನು 6 ತಿಂಗಳುಗಳ ಕಾಲ ಜಾಮೀನು ನೀಡದೆ ಬಂಧಿಸಬಹುದಾಗಿದೆ. ಸಾಮಾನ್ಯ ಕಾಯ್ದೆಗಳಲ್ಲಿ ಆರೋಪವನ್ನು ಸಾಬೀತುಪಡಿಸುವ ಜವಾಬ್ದಾರಿ ಪ್ರಾಸಿಕ್ಯೂಷನ್‌ನದ್ದು. ಆದರೆ ಈ ಪ್ರಕರಣದಲ್ಲಿ ತಾನು ಅಪರಾಧಿಯಲ್ಲ ಎಂದು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಯದ್ದು. ಕಾಯ್ದೆಯು ರಾಜಕೀಯ ಎದುರಾಳಿಗಳ ವಿರುದ್ಧ ವ್ಯಾಪಕವಾಗಿ ದುರುಪಯೋಗಿಸಲ್ಪಡುವ ಸಾಧ್ಯತೆ ಇರುವುದರಿಂದ ಅದನ್ನು ಹಿಂದೆಗೆಯಬೇಕೆಂದು ಎಸ್.ಡಿ.ಪಿ.ಐ ಒತ್ತಾಯಿಸಿತ್ತು.

1967ರಲ್ಲಿ ಪಾಸು ಮಾಡಿದ ಯುಎಪಿಎ ಕಾನೂನಿಗೆ ಯುಪಿಎ ಸರಕಾರ 2008 ಮತ್ತು 2012ರಲ್ಲಿ ತಿದ್ದುಪಡಿ ತಂದು ಜಾರಿಗೊಳಿಸಿತ್ತು. ಭಯೋತ್ಪಾದನಾ ಚಟುವಟಿಕೆಗಳನ್ನು ತಡೆಯುವ ಹೆಸರಿನಲ್ಲಿ ಜಾರಿಗೆ ತರಲಾಗಿರುವ ಈ ಕರಾಳ ಕಾನೂನು ಮುಸ್ಲಿಮರು , ದಲಿತರು, ಆದಿವಾಸಿಗಳು ಮತ್ತು ಹಿಂದುಳಿದ ವರ್ಗಗಳನ್ನು ಸಂಶಯದ ನೆರಳಲ್ಲಿ ತಳ್ಳಲು, ಅವರನ್ನು ಅಧಿಕಾರದ ಮುಖ್ಯವಾಹಿನಿಗೆ ಬರುವುದನ್ನು ತಡೆಯಲು ಮತ್ತು ಸರಕಾರಿ ವಿರೋಧಿ ಧ್ವನಿಗಳನ್ನು ಹತ್ತಿಕ್ಕಲು ಮತ್ತು ಹೋರಾಟಗಾರರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಲು ದುರುಪಯೋಗ ಪಡಿಸಲಾಗುತ್ತಿದೆ ಎಂದು ಎಸ್.ಡಿ.ಪಿ.ಐ ಆಗ ಎಚ್ಚರಿಸಿತ್ತು.

ಸಮಾಜದ ವಿವಿಧ ವರ್ಗಗಳಿಗೆ ಸೇರಿದ ಕೋಬಾಡ್ ಗಾಂಧಿ, ಸೋನಿಸೂರಿ, ಸೀಮಾ ಅಝಾದ್, ಇಮ್ರಾನ್ ಕಿರಾ ಕಿರ್ಮಾನಿ, ಗುಲಾಂ ರಸೂಲ್, ಎಂಜಿಲಾ ಸೊಂಟಕೆ, ಝಿಯಾವುರ್ರಹ್ಮಾನ್, ಕೇರಳದ ಅಬ್ದುನ್ನಾಸರ್ ಮಅದನಿ (4ವರ್ಷ), ಝಕರಿಯ್ಯ (4ವರ್ಷ), ಶಿಬಿಲಿ(5ವರ್ಷ) ಶಾದುಲಿ(5ವರ್ಷ) ಯುಎಪಿಎ ಹೇರಲ್ಪಟ್ಟು ಜೈಲುಗಳ ಕತ್ತಲೆ ಕೋಣೆಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಆ ಸಂದರ್ಭದಲ್ಲಿ ಪಕ್ಷವು ಬಿಡುಗಡೆಗೊಳಿಸಿದ ಕರಪತ್ರಗಳಲ್ಲಿ ಉಲ್ಲೇಖಿಸಲಾಗಿದೆ.

ಸಾಮಾನ್ಯ ಕಾಯ್ದೆಗಳಲ್ಲಿ ಆರೋಪವನ್ನು ಸಾಬೀತುಪಡಿಸುವ ಜವಾಬ್ದಾರಿ ಪ್ರಾಸಿಕ್ಯೂಷನ್‌ನದ್ದು. ಆದರೆ ಈ ಪ್ರಕರಣದಲ್ಲಿ ತಾನು ಅಪರಾಧಿಯಲ್ಲ ಎಂದು ಸಾಬೀತುಪಡಿಸುವ ಹೊಣೆಗಾರಿಕೆ ಆರೋಪಿಯದ್ದು. ಅಲ್ಲದೆ ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟು ನಂತರ ನಿರಪರಾಧಿಯೆಂದು ಬಿಡುಗಡೆಗೊಂಡರು ಅವರು ನಷ್ಟಪರಿಹಾರವನ್ನು ಕೇಳುವಂತಿಲ್ಲ. ಈ ಕಾನೂನು ಜನರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕಸಿಯುತ್ತದೆ ಎಂದು ಎಸ್.ಡಿ.ಪಿ.ಐ ಆತಂಕ ವ್ಯಕ್ತಪಡಿಸಿತ್ತು.

- Advertisement -