ಬಾಬಾ ಬುಡಾನ್ ಗಿರಿ ಉರೂಸ್’ಗೆ ಅನುಮತಿಸುವಂತೆ SDPI ಆಗ್ರಹ

Prasthutha|

ಬೆಂಗಳೂರು: ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ಇನಾಂ ದತ್ತಾತ್ರೆಯ ಸ್ವಾಮಿ ದರ್ಗಾದಲ್ಲಿ ಮಾರ್ಚ್ 18 ರಿಂದ 21 ರವರೆಗೆ ನಡೆಯುವ ಸಂದಲ್ – ಉರೂಸ್ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ, ಅಗತ್ಯ ನೆರವು ಮತ್ತು ಪೊಲೀಸ್ ಭದ್ರತೆಯನ್ನು ನೀಡುವಂತೆ SDPI ಆಗ್ರಹಿಸಿದೆ.

- Advertisement -

ಈ ಕುರಿತು ಚಿಕ್ಕಮಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಅವರು, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿಯಲ್ಲಿರುವ ದರ್ಗಾಕ್ಕೆ ಸಂಬಂಧಿಸಿದಂತೆ ವಿಳಂಬ ನೀತಿಯನ್ನು ಅನುಸರಿಸಲಾಗುತ್ತಿದೆ. ಇದನ್ನು ಕೇಂದ್ರೀಕರಿಸಿ ಸಮಾಜದ ಸಾಮರಸ್ಯವನ್ನು ಕದಡುವ ಯತ್ನ ಕೆಲ ಶಕ್ತಿಗಳಿಂದ ನಡೆಯುತ್ತಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಕೋಮುಗಲಭೆ ಕೂಡ ನಡೆದಿದೆ ಎಂದು ಅವರು ವಿಷಾದಿಸಿದರು.

ಹಿಂದೂ – ಮುಸ್ಲಿಮ್ ಸಮುದಾಯಗಳು ಈ ದರ್ಗಾವನ್ನು ಅವಲಂಬಿಸಿರುವುದನ್ನು ಸರ್ಕಾರ ಗಣನೆಗೆ ತೆಗುದುಕೊಂಡು, ಉರೂಸ್ ನಡೆಯುವ ಸಂದರ್ಭದಲ್ಲಿ ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸಿ ಸೂಕ್ತ ಭದ್ರತೆಯನ್ನು ವ್ಯವಸ್ಥೆಗೊಳಿಸುವ ಮೂಲಕ ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಪೂಜಾ ವಿಧಿ – ವಿಧಾನಕ್ಕೆ ಸಂಬಂಧಿಸಿದಂತೆ ಸಜ್ಜಾದ ನಶಿನ್ ಖಾದ್ರಿಯವರಿಂದ ನೇಮಿಸಲ್ಪಟ್ಟ ಮುಜಾವರ್ ಮಾತ್ರ ಗುಹೆಯ ಗರ್ಭಗುಡಿಯೊಳಗೆ ಪ್ರವೇಶಿಸಿ ಹಿಂದೂ – ಮುಸ್ಲಿಮ್ ಭಕ್ತಾಧಿಗಳಿಗೆ ಪ್ರಸಾದ ವಿತರಿಸಬೇಕು. ಸದರಿ ಅಧಿಕಾರ ಮತ್ತು ಅನುಮತಿಯನ್ನು ಸುಪ್ರೀಮ್ ಕೋರ್ಟ್ ಆದೇಶದನ್ವಯ ರಾಜ್ಯ ಸರ್ಕಾರ ಪಾಲನೆ ಮಾಡುವಲ್ಲಿ ನಿರ್ಲಕ್ಷ ವಹಿಸಿದೆ. ಇದನ್ನು ಪ್ರಶ್ನಿಸಿ ದರ್ಗಾದ ಸಜ್ಜಾದ ನಶಿನ್ ಸೈಯ್ಯದ್ ಗೌಸ್ ಮುಹಿಯುದ್ದೀನ್ ಖಾದ್ರಿ ಅವರು ಮೂಲ ಸಿವಿಲ್ ಅಫೀಲ್ ನಂಬ್ರ 2686/ 2010 ರಲ್ಲಿ ಸುಪ್ರೀಮ್ ಕೋರ್ಟ್ ನೀಡಿದ ಆದೇಶವನ್ನು ಸರ್ಕಾರ ಪಾಲನೆ ಮಾಡುತ್ತಿಲ್ಲ.

ಹೀಗಾಗಿ ಸರ್ಕಾರದ ವಿರುದ್ಧ ಅರ್ಜಿ ಸಂಖ್ಯೆ 1761/ 2017 ಮತ್ತು 715 / 2018 ರಂತೆ ನ್ಯಾಯಾಂಗ ನಿಂದನೆ ವಿರುದ್ಧ ಕ್ರಮ ಜರುಗಿಸಲು ಕೋರಿ ಪ್ರಕರಣ ದಾಖಲಿಸಿರುತ್ತಾರೆ. ಸದ್ರಿ ಪ್ರಕರಣ ವಿಚಾರಣೆಗೆ ಹಾಜರಾದ ಅಂದಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ 2018 ರ ಮಾರ್ಚ್ 31 ರ ಸರ್ಕಾರ ಸುಪ್ರೀಮ್ ಕೋರ್ಟ್ ನಲ್ಲಿ ಸಲ್ಲಿಸಿರುವ ಸತ್ಯಾಪನಾ ಪ್ರಮಾಣ ಪತ್ರದ ಅನುಸಾರ ಸರ್ಕಾರ ನಡೆದುಕೊಳ್ಳಲು ಬದ್ಧವಾಗಿರುತ್ತದೆ ಎಂದು ಒಪ್ಪಿದೆ. ಅದರಂತೆ ನ್ಯಾಯಾಂಗ ನಿಂದನೆಯ ಅರ್ಜಿಯು ಸುಪ್ರೀಮ್ ಕೋರ್ಟ್ ನಲ್ಲಿ ಮುಕ್ತಾಯಗೊಂಡಿದೆ. ಹೀಗಾಗಿ ಬಾಬಾಬುಡನ್ ಗಿರಿಯಲ್ಲಿ ಪೂಜಾ ವಿಧಿ – ವಿಧಾನ ನೆರವೇರಿಸಲು ಮುಜಾವರ್ ಅವರಿಗೆ ಅವಕಾಶ ನೀಡಬೇಕೆಂದು ಅಪ್ಸರ್ ಕೊಡ್ಲಿಪೇಟೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ SDPI ಮುಖಂಡರಾದ ಭಾಸ್ಕರ್ ಪ್ರಸಾದ್, ಚಾಂದ್ ಪಾಶಾ, ರಿಯಾಝ್ ಕಡಂಬು, ಗೌಸ್ ಮುನೀರ್ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp