ರೈತರನ್ನು ಜೀತಕ್ಕೆ ತಳ್ಳುವ ಬಿಜೆಪಿ ಸರಕಾರದ ನೀತಿ ಅತ್ಯಂತ ಅಪಾಯಕಾರಿ | ಮಜೀದ್ ಖಾನ್

Prasthutha|

ರೈತ, ದಲಿತ ಮತ್ತು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧದ ಐಕ್ಯ ಹೋರಾಟವನ್ನು ಬೆಂಬಲಿಸಿ ನಡೆದ ಸುದ್ದಿಗೋಷ್ಠಿ

- Advertisement -

ರೈತರ ಸಮಸ್ಯೆಗಳನ್ನು ಪರಿಹರಿಸುವ ಬದಲಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ದುಷ್ಟ ನೀತಿಯನ್ನು ತರುವ ಮೂಲಕ ಜನಸಾಮಾನ್ಯರನ್ನು ಇನ್ನಷ್ಟು ಬಡತನಕ್ಕೆ ತಳ್ಳುತ್ತಿವೆ ಹಾಗೂ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಖರೀದಿಸಲು ಅವಕಾಶ ಮಾಡಿಕೊಡುತ್ತಿವೆ. ಈ ಮೂಲಕ ರೈತರನ್ನು ಜೀತಕ್ಕೆ ತಳ್ಳುವ ಬಿಜೆಪಿ ಸರಕಾರದ ನೀತಿ ಅತ್ಯಂತ ಅಪಾಯಕಾರಿ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಉಪಾಧ್ಯಕ್ಷ ಅಡ್ವೊಕೇಟ್ ಮಜೀದ್ ಖಾನ್ ಹೇಳಿದ್ದಾರೆ.

ಬೆಂಗಳೂರಿನ ಕಬ್ಬನ್ ಪೇಟೆಯ ಹಮೀದ್ ಶಾ ಕಾಂಪ್ಲೆಕ್ಸ್ ನಲ್ಲಿರುವ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ರೈತ, ದಲಿತ ಮತ್ತು ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧದ ಐಕ್ಯ ಹೋರಾಟವನ್ನು ಬೆಂಬಲಿಸಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟೀಕರಣ ಮಾಡಲು ಹೊರಟಿರುವುದರೊಂದಿಗೆ ರೈತರನ್ನು ಶಾಶ್ವತವಾಗಿ  ಜೀತದಾಳುಗಳನ್ನಾಗಿಸಲು ಪಣತೊಟ್ಟಿವೆ. ಗ್ರಾಮೀಣ ಪ್ರದೇಶಗಳ ಜನರು ಹಾಗೂ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುವ ಬಿಜೆಪಿ ಸರಕಾರಗಳ ಈ  ದುರ್ನೀತಿಯ ವಿರುದ್ಧ ಎಸ್.ಡಿ.ಪಿ.ಐ ಪಕ್ಷ ಇತರೆ  ಸಮಾನ ಮನಸ್ಕರ ಜೊತೆಗೂಡಿ ಹೋರಾಟ ನಡೆಸಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಐಕ್ಯ ಹೋರಾಟಕ್ಕೆ ನಮ್ಮ ರಾಜ್ಯ, ಜಿಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

- Advertisement -

ಬಂಡವಾಳಶಾಹಿಗಳು ಕೃಷಿಭೂಮಿಯನ್ನು ಖರೀದಿಸುವ ಮಿತಿಯನ್ನು ಸರಕಾರಗಳು ತೆಗೆದು ಹಾಕಿರುವುದರಿಂದ ಕೃಷಿ ಜಮೀನುಗಳು ದೊಡ್ಡ ಜಮೀನುದಾರ ಹಾಗೂ ಧನಿಕರ ಪಾಲಾಗುವುದು. ಸಾಲದ ಸುಳಿಯಿಂದ ತತ್ತರಿಸಿರುವ ಬಡ ರೈತರು ತಮ್ಮ ಜಮೀನುಗಳನ್ನು ಬಲಾಢ್ಯ ಹಾಗೂ ಉಳಿಗಮಾನ್ಯರಿಗೆ ಮಾರುವುದರಿಂದ ರೈತರು ಕೃಷಿಕ್ಷೇತ್ರವನ್ನು ತ್ಯಜಿಸುವುದರೊಂದಿಗೆ ಜೀತದಾಳುಗಳು ಆಗುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಎಂದು ಮಜೀದ್ ಖಾನ್ ಆತಂಕ ವ್ಯಕ್ತಪಡಿಸಿದರು.

ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯಲ್ಲದೆ, ವಿದ್ಯುತ್ ಕಾಯ್ದೆಗೂ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರ ರೈತರ ಗಾಯದ ಮೇಲೆ ಬರೆ ಎಳೆದಿದೆ. ಕನಿಷ್ಠ ಬೆಂಬಲ ಬೆಲೆಯ ವ್ಯವಸ್ಥೆಯನ್ನು ಬುಡಮೇಲು ಗೊಳಿಸಿ ಖಾಸಗಿ ಉದ್ಯಮಿಗಳಿಗೆ ಕೃಷಿ ಉತ್ಪನ್ನ ಮಂಡಿ ಮತ್ತು ಮಾರುಕಟ್ಟೆಗಳಲ್ಲಿ ಹಿಡಿತ ಸಾಧಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಕಾಯ್ದೆಯನ್ನು ಜಾರಿಗೆ ತಂದಿದೆ. ದೇಶದಾದ್ಯಂತ ರೈತ ಸಮುದಾಯದಿಂದ ತೀವ್ರತರದ ಆಕ್ಷೇಪಗಳು ಹಾಗೂ ಪ್ರತಿಭಟನೆಗಳು ವ್ಯಕ್ತವಾದರೂ ಸಹ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಸೂದೆಯನ್ನು ಅಂಗೀಕರಿಸಿರುವುದು ಅವುಗಳ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ಎತ್ತಿ ತೋರಿಸಿದೆ ಎಂದು ಹೇಳಿದರು.

ಈ ನಡುವೆ ಕರ್ನಾಟಕ ರಾಜ್ಯ ಸರಕಾರದ ವಿಧಾನಸಭಾ ಅಧಿವೇಶನವನ್ನು ಮೊಟಕುಗೊಳಿಸುವ ತೀರ್ಮಾನವನ್ನು ಗಮನಿಸಿದರೆ  ಬಿಜೆಪಿ ಸರಕಾರವು ಜಾರಿಕೊಳ್ಳುವ ನೀತಿಯನ್ನು ಅವಲಂಬಿಸಿದೆ ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಆಗುತ್ತೆ.  ಇದು ಪ್ರಜಾಪ್ರಭುತ್ವದ ಮೇಲೆ ಬಿಜೆಪಿ ಸರಕಾರ ನಡೆಸಿದ ಪ್ರಹಾರವೂ ಆಗಿದೆ. ಕೋವಿಡ್ ಭ್ರಷ್ಟಾಚಾರ, ಆಂತರಿಕ ಕಚ್ಚಾಟ, ಆರ್ಥಿಕ ದುಸ್ಥಿತಿ, ಇತ್ಯಾದಿ ವಿಷಯಗಳನ್ನು ಎದುರಿಸಲಾಗದೆ ಅಧಿವೇಶನವನ್ನು ಮುಂದೂಡಿರುವುದು ಹೇಡಿತನದ ಕೃತ್ಯ. ಮಾತ್ರವಲ್ಲದೇ ಅದು ಪ್ರಜಾಪ್ರಭುತ್ವ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಮಜೀದ್ ಖಾನ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಫ್ಸರ್ ಕೂಡ್ಲೀಪೇಟೆ, ಅಶ್ರಫ್ ಮಾಚಾರ್, ರಾಜ್ಯ ಮಾಧ್ಯಮ ಸಂಯೋಜಕ ಅಬ್ರಾರ್ ಅಹ್ಮದ್, ಬಿ.ಬಿ.ಎಮ್.ಪಿ ಸದಸ್ಯ ಮುಜಾಹೀದ್ ಪಾಷ, ರಾಜ್ಯ ಸಮಿತಿ ಸದಸ್ಯ ಫಯಾಝ್ ಅಹ್ಮದ್, ಬೆಂಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಮ್ ಆಹಮದ್ ಉಪಸ್ಥಿತರಿದ್ದರು.

Join Whatsapp