ಶ್ರೀಕಾಂತ್ ಬಬಲಾಡಿ ನೇತೃತ್ವದ ಬೆಂಗಳೂರು ಗಲಭೆಯ ವರದಿ ಪೂರ್ವಾಗ್ರಹಪೀಡಿತವಾಗಿದೆ : ಎಸ್.ಡಿ.ಪಿ.ಐ

Prasthutha News

ಬೆಂಗಳೂರು ಡಿ.ಜೆ.ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ‘ಸಿಟಿಜನ್ ಫಾರ್ ಡೆಮಾಕ್ರಸಿ’ ಎಂಬ ಹೆಸರಿನಿಂದ ಶ್ರೀಕಾಂತ್  ಬಬಲಾಡಿ ನೇತೃತ್ವದಲ್ಲಿ ತಯಾರಿಸಲಾದ ಸತ್ಯಶೋಧನಾ ವರದಿಯು ವಾಸ್ತವ ಅಂಶಗಳನ್ನು ಮರೆಮಾಚಿದ್ದು ಮಾತ್ರವಲ್ಲದೇ, ಪೂರ್ವಗ್ರಹ ಪೀಡಿತವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ ಹೇಳಿದ್ದಾರೆ.

ಪ್ರವಾದಿಯವರನ್ನು ನಿಂದಿಸಿದ ವ್ಯಂಗ್ಯ ಚಿತ್ರ ಹಾಗೂ ಹೀನಾಯವಾದ ಬರಹಗಳನ್ನು ಪೋಸ್ಟ್ ಮಾಡಿದ ನವೀನ್ ಮತ್ತು ಆತನ ಹಿಂದಿರುವ ಸಂಘಪರಿವಾರದ ದುಷ್ಟ ಶಕ್ತಿಗಳ ಬಗ್ಗೆ ಬೆಳಕು ಚೆಲ್ಲದ ಆ ವರದಿಯು ಅಂತಹ ಶಕ್ತಿಗಳ ಹುನ್ನಾರವನ್ನು ಮುಚ್ಚಿಡುವ ಪ್ರಯತ್ನವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಸತ್ಯಶೋಧನಾ ತಂಡದಲ್ಲಿದ್ದ ಸದಸ್ಯರು ಬಿಜೆಪಿ ಮತ್ತು ಸಂಘಪರಿವಾರದ ಹಿನ್ನಲೆಯವರಾಗಿದ್ದು, ಅವರಿಂದ ಸತ್ಯವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಸರಕಾರದ ಶೋಚನೀಯ ವೈಫಲ್ಯ ಮತ್ತು ಪೊಲೀಸ್ ನಿಷ್ಕ್ರಿಯತೆಯ ಬಗ್ಗೆಯೂ ವರದಿ ಬೆಳಕು ಚೆಲ್ಲದೆ ಘಟನೆಯಲ್ಲಿ ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಹೆಸರನ್ನು ಎಳೆದು ತಂದಿರುವುದು ಹಾಸ್ಯಾಸ್ಪದವಾಗಿದೆ. ಗಲಭೆಯ ದಿನ ಆಕ್ರೋಶಿತ ಜನರನ್ನು ಸಮಾಧಾನ ಪಡಿಸಲು ಪೊಲೀಸರೊಂದಿಗೆ  ನಿರಂತರವಾಗಿ ಶ್ರಮಿಸಿದ ಸ್ಥಳೀಯ ಎಸ್.ಡಿ.ಪಿ.ಐ ನಾಯಕರನ್ನು ಬಿಜೆಪಿ ಸರಕಾರದ ಕುಮ್ಮಕ್ಕಿನಿಂದಲೇ ಪ್ರಕರಣದಲ್ಲಿ ಸಿಲುಕಿಸಿರುವುದನ್ನು ರಾಜ್ಯದ ಜನತೆ ಅರಿತುಕೊಂಡಿದ್ದಾರೆ. ಆತ್ಮಸಾಕ್ಷಿಯನ್ನು ಅಡವಿಟ್ಟು ಸುಳ್ಳನ್ನು ಉಣಬಡಿಸುವ ಇಂತಹ ವರದಿಗಳು ರಾಜ್ಯ ಹಾಗೂ ಜನತೆಯ ಹಿತಾಸಕ್ತಿಗೆ ಮಾರಕ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಎಚ್ಚರಿಸಿದ್ದಾರೆ.


Prasthutha News

Leave a Reply

Your email address will not be published. Required fields are marked *