ವಿಎಚ್ ಪಿ ಕಾರ್ಯಕರ್ತನ ದೂರು | ಒಡಿಶಾ ಮುಸ್ಲಿಮ್ ವ್ಯಕ್ತಿಯ ವಿರುದ್ಧ ದೇಶದ್ರೋಹ ಪ್ರಕರಣ

Prasthutha News

ಭುವನೇಶ್ವರ : ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನೊಬ್ಬನ ದೂರಿನ ಆಧಾರದಲ್ಲಿ ಉತ್ತರ ಪ್ರದೇಶ ಪೊಲೀಸರು ಒಡಿಶಾದ ಕಟಕ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬರನ್ನು ಬಂಧಿಸಿ, ದೇಶದ್ರೋಹದ ಪ್ರಕರಣ ದಾಖಲಿಸಿದ್ದಾರೆ. ಕಟಕ್ ನ ಸಲೇಪುರ ಸಮೀಪದ ಕುಸಂಬಿ ಗ್ರಾಮದ ನಿವಾಸಿ ಸಯೀದ್ ಹಸನ್ ಅಹ್ಮದ್ ಎಂಬವರು ಬಂಧಿತ ವ್ಯಕ್ತಿ. ಇವರ ಫೋನ್ ನಿಂದ ಬೆದರಿಕೆ ಕರೆ ಬಂದಿತ್ತು ಎಂದು ಆಪಾದಿಸಲಾಗಿದೆ.

ಬಂಧಿತನ ವಿರುದ್ಧ ಪೊಲೀಸರು ಐಪಿಸಿ ಕಲಂಗಳಾದ 507, 153ಎ, 124ಎ ಮತ್ತು 504ರಡಿ ಪ್ರಕಣ ದಾಖಲಿಸಿದೆ. ಇವುಗಳಲ್ಲಿ ಕಲಂ 124ಎ ದೇಶದ್ರೋಹಕ್ಕೆ ಸಂಬಂಧಿಸಿದ್ದು.
ಆರಂಭದಲ್ಲಿ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯಲ್ಲಿ ವಿಎಚ್ ಪಿ ಕಾರ್ಯಕರ್ತ ಕುಲದೀಪ್ ಪಾಂಚಾಲ್ ಎಂಬಾತ ನೀಡಿದ್ದ ದೂರಿನ ಆಧಾರದಲ್ಲಿ, ಬೆದರಿಕೆಯೊಡ್ಡಿದ್ದ ಬಗ್ಗೆ ಮಾತ್ರ ದೂರು ದಾಖಲಾಗಿತ್ತು. ಆದರೆ, ಬಳಿಕ ಹೆಚ್ಚುವರಿ ತನಿಖೆ ನಡೆಸಿದ ಪೊಲೀಸರು ಅಹ್ಮದ್ ವಿರುದ್ಧ ದೇಶದ್ರೋಹದ ಪ್ರಕರಣ ಸೇರಿದಂತೆ ಇತರ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಹ್ಮದ್, ಸಲೇಪುರ ಮಾರುಕಟ್ಟೆಯಲ್ಲಿ ಸಣ್ಣ ಟಾರ್ಚ್ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಆತ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪೋಸ್ಟ್ ಗಳನ್ನು ಹಾಕಿದ್ದಾನೆ ಎಂದು ಆಪಾದಿಸಲಾಗಿದೆ.

ಆದರೆ, ಅಹ್ಮದ್ ಅವರ ತಂದೆ ಶಾಲಾ ಶಿಕ್ಷಕ, ಸಯೀದ್ ರಶೀದ್, ಪೊಲೀಸರ ಆರೋಪಗಳನ್ನು ನಿರಾಕರಿಸಿದ್ದಾರೆ. ನನ್ನ ಮಗ ಯಾವತ್ತೂ ಯಾರಿಗೂ ಬೆದರಿಕೆಯೊಡ್ಡಿಲ್ಲ. ನಮ್ಮ ಪ್ರದೇಶದಲ್ಲಿ ಮಗನ ಮೇಲೆ ಯಾವುದೇ ಪ್ರಕರಣಗಳಿಲ್ಲ. ಬಾಗ್ಪತ್ ಮತ್ತು ಸಲೇಪುರಕ್ಕೆ ಎಷ್ಟು ದೂರ ಇದೆ ಎಂಬುದಾಗಿ ನಾನು ಯೋಚಿಸುತ್ತಿದ್ದೇನೆ ಎಂದು ರಶೀದ್ ಹೇಳಿದ್ದಾರೆ. ಸ್ಥಳೀಯ ಪೊಲೀಸರಿಗೂ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿಲ್ಲ. ಬಂಧನದ ವಿಷಯದಲ್ಲಿ ಉತ್ತರ ಪ್ರದೇಶ ಪೊಲೀಸರಿಗೆ ಸಹಕರಿಸಿದ್ದ ಬಗ್ಗೆ ಮಾತ್ರ ಅವರು ಹೇಳುತ್ತಾರೆ.

ಫೋಟೊ ಕೃಪೆ : The Wire


Prasthutha News

Leave a Reply

Your email address will not be published. Required fields are marked *